ಗುರುಕೃಪೆಯಿಂದ ಸಮಾಜದಲ್ಲಿ ಉನ್ನತ ಸ್ಥಾನ

13kmr1
ಕಮಲನಗರದ ತೇಲಂಗ್ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಂತಿವರ್ಧಕ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಎಸ್.ಎಸ್.ಹೂಗಾರ, ಪ್ರಕಾಶ ಮಾನಕರಿ, ಎಸ್.ಎಸ್.ದ್ವಾಸೆ, ಬಸವರಾಜ ತೇಲಂಗ್, ನಿಜಲಿಂಗಪ್ಪ ಮಹಾಜನ ಇತರರಿದ್ದರು.
Published on

ಕಮಲನಗರ: ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಎಸ್.ಎಸ್.ಹೂಗಾರ ಹೇಳಿದರು.

ಪಟ್ಟಣದ ತೇಲಂಗ್ ಕಲ್ಯಾಣ ಮಂಟಪದಲ್ಲಿ ಶಾಂತಿ ವರ್ಧಕ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೯೮೦ನೇ ಸಾಲಿನ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಅಂದಿನಿಂದ ಇಲ್ಲಿಯವರೆಗೂ ಸೇವೆ ಸಲ್ಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿದ್ಯಾರ್ಥಿ ಜೀವನದ ನೂರಾರು ನೆನಪುಗಳು ಕಣ್ಣು ಮುಂದೆ ಬರುವಂತೆ ಮಾಡಿದೆ ಎಂದರು.

ನಿವೃತ್ತ ದೈಹಿಕ ಶಿಕ್ಷಕ ಪ್ರಕಾಶ ಮಾನಕರಿ ಮಾತನಾಡಿ, ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೇವೆ. ಹಾಗಾಗಿ ಈ ಸಮಾಜದಿಂದ ಪಡೆದದ್ದನ್ನು ನಾವು ಮತ್ತೆ ಸಮಾಜಕ್ಕೆ ವಾಪಸ್ ನೀಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲೇಬೇಕು. ಸುಮಾರು ೪೫ ವರ್ಷ ನಂತರವೂ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು, ಅವರಿಗೆ ವಂದಿಸುವ ಕಾರ್ಯ ಮಾದರಿಯಾಗಿದೆ ಎಂದರು.

ಹಳೆಯ ವಿದ್ಯಾರ್ಥಿ ನಿಜಲಿಂಗಪ್ಪಾ ಮಹಾಜನ ಮಾತನಾಡಿ, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.

ಬಸವರಾಜ್ ತೆಲಂಗ್, ಜ್ಞಾನೇಶ್ವರ ಕೊಣಗುತ್ತೆ, ರವಿ ಜೋಳೆ, ಪಂಡಿತ್ ಬಾಳೂರೆ, ನಾಗನಾಥ ಝುಲ್ಪೆ, ಮನೋಹರ ನವಾಡೆ, ಬಾಬುರಾವ್, ಎಸ್. ಎಸ್.ದ್ವಾಸೆ, ಭಾಡಸಿಂಗೆ, ಬಸವರಾಜ ಘಾಟೆ ಇತರರಿದ್ದರು.

ಈ ವೇಳೆ ಶಿಕ್ಷಕರಿಗೆ ಗೌರವಪೂರ್ವಕ ಸನ್ಮಾನ ಮಾಡಲಾಯಿತು. ಜತೆಗೆ ಅಗಲಿದ ಗುರುಗಳು ಹಾಗೂ ಗೆಳೆಯರ ಸ್ಮರಣಾರ್ಥ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net