ಗುರುಕುಲ ಸಾಧಕರಿಗೆ ಕಸಾಪ ಗೌರವ

sanman
Published on

ಭಾಲ್ಕಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಸಾಧನೆ ಮೆರೆದ ಇಲ್ಲಿನ ಚನ್ನಬಸವೇಶ್ವರ ಗುರುಕುಲ ಪ್ರೌಢ ಶಾಲೆಯ ವಿದ್ಯಾರ್ಥಿ ಆಶಿಶ್ ಬಸವರಾಜ ಮೊಳಕೀರೆ ಹಾಗೂ ಅಪರಾಜಿತೇಶ್ವರಿ ಸೂರ್ಯಕಾಂತ ಬಿರಾದಾರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಬಹುಮಾನ ನೀಡಿ ಬೆನ್ನು ತಟ್ಟಿದೆ.

ಬೆಂಗಳೂರಿನ ಪರಿಷತ್ ಕೇಂದ್ರ ಸಮಿತಿಯ ಶ್ರೀಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಇವರಿಗೆ ಗೌರವಿಸಿ ಸಾಧನೆಗೆ ಭೇಷ್ ಎನ್ನಲಾಯಿತು. ಆಶಿಶ್ ಮತ್ತು ಅಪರಾಜಿತೇಶ್ವರಿ ಅವರು ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳ ಪೈಕಿ 621 ಗಳಿಸಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದರು. ಈ ಸಾಧನೆಗೆ ಪರಿಷತ್ ಹೆಮ್ಮೆಪಟ್ಟು ಅಭಿನಂದಿಸಿದೆ.

ಪರಿಷತ್ ಗೌರವ ಕಾರ್ಯದರ್ಶಿ ಡಾ. ಕೆ.ರಾಜಕುಮಾರ, ಗೌರವ ಸಂಚಾಲಕ ಡಾ. ಪದ್ಮರಾಜ ದಂಡಾವತಿ ಅವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನಿಸಲಾಗಿದೆ. ಇಬ್ಬರಿಗೂ ತಲಾ 4 ಸಾವಿರ ರೂ. ಚೆಕ್ ಬಹುಮಾನ ರೂಪದಲ್ಲಿ ನೀಡಲಾಗಿದೆ. ಅಭಿನಂದನಾ ಪತ್ರ ಹಾಗೂ ಸಂಕ್ಷಿಪ್ತ ಕನ್ನಡ ನಿಘಂಟು ನೀಡಿ ಗೌರವಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ ಈ ಸಾಧನೆ ಮಾಡುವ ಮೂಲಕ ತಾವು ಕನ್ನಡಿಗರ ಹೆಮ್ಮೆಗೆ ಪಾತ್ರರಾಗಿರುವಿರಿ ಎಂದು ಅಭಿನಂದನಾ ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಗುರುಕುಲದಲ್ಲಿ ಹೆಚ್ಚಾಗಿ ಕನ್ನಡ ಮಾಧ್ಯಮದ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. ಇಲ್ಲಿರುವ ಪರಿಣತ ಬೋಧಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ನೀಡುತ್ತಿದ್ದಾರೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಗುರುಕುಲ ಮಕ್ಕಳು ತಮ್ಮ ಪ್ರತಿಭೆ ಮೂಲಕ ರಾಜ್ಯಮಟ್ಟದಲ್ಲಿ ತಮ್ಮ ಛಾಪು ಮೂಡಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕಸಾಪದಿಂದ ಇಬ್ಬರಿಗೆ ಗೌರವ ಸಂದಿರುವುದು ಖುಷಿ ತಂದಿದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಸಂಸ್ಥಾಪಕ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷ ಶ್ರೀ ಗುರುಬಸವ ಪಟ್ಟದ್ದೇವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net