

ಬೀದರ್: ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದ ಪ್ರತಿಭೆಗಳಿಗೆ ಸನ್ಮಾನ ಸಮಾರಂಭ ಜೂ.24ರಂದು ಆಯೋಜಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಂಗಳವಾರ ಕಲಬುರಗಿಯಲ್ಲಿ ಸಚಿವರ ನಿವಾಸದಲ್ಲಿ ಸತ್ಕರಿಸಿ ಆಹ್ವಾನ ನೀಡಿದ ಶ್ರೀಗಳು, ಗುರುಕುಲದ 200ಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ನಲ್ಲಿ ಉತ್ತಮ ಅಂಕ ಪಡೆದು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯುವ ಅರ್ಹತೆ ಹೊಂದಿದ್ದಾರೆ. ಭಾವಿ ವೈದ್ಯರಿಗೆ ಸತ್ಕರಿಸಿ ಪ್ರೇರಣೆ ನೀಡುವಂತೆ ಸಚಿವರಿಗೆ ಆಮಂತ್ರಣ ನೀಡಿದರು.
ಗಡಿ ಜಿಲ್ಲೆಯಲ್ಲಿ ಗುರುಕುಲ ಸಂಸ್ಥಾಪಕರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಧಾರ್ಮಿಕ, ಸಾಮಾಜಿಕ, ಅಧ್ಯಾತ್ಮದ ಜತೆಗೆ ಶೈಕ್ಷಣಿಕ ರಂಗದಲ್ಲಿ ಕ್ರಾಂತಿ ಮಾಡಿದ್ದಾರೆ. ಅವರ ನೇತೃತ್ವದ ಸಂಸ್ಥೆಯಿಂದ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ವೈದ್ಯಕೀಯ ಸೇರಿ ವಿವಿಧ ಉನ್ನತ ಕೋಸ್೯ಗಳಿಗೆ ಆಯ್ಕೆಯಾಗುತ್ತಿದ್ದಾರೆ. ನೀಟ್ ಸಾಧಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವುದಾಗಿ ಸಚಿವ ಪಾಟೀಲ್ ಭರವಸೆ ನೀಡಿದರು. ವಿಟಿಯು ಪ್ರಾದೇಶಿಕ ನಿರ್ದೇಶಕ ಡಾ.ಬಸವರಾಜ ಗಾದಗೆ ಇದ್ದರು.