ಗುರು, ಹಿರಿಯರ ಸೇವೆ ಮಾಡಿ

Srimandal
Published on

ಬೀದರ್: ಜೀವನ ಸಾರ್ಥಕತೆಗೆ ಗುರು, ಹಿರಿಯರ ಸೇವೆ ಮಾಡಬೇಕು ಎಂದು ತೆಲಂಗಾಣದ ಜಹೀರಾಬಾದ್ ತಾಲೂಕಿನ ಮಲ್ಲಯ್ಯನ ಗಿರಿ ಆಶ್ರಮದ ಶ್ರೀ ಡಾ.ಬಸವಲಿಂಗ ಅವಧೂತರು ಹೇಳಿದರು.

ತಾಲೂಕಿನ ಶ್ರೀಮಂಡಲ್ ಗ್ರಾಮದಲ್ಲಿ ಸೋಮವಾರ ಜರುಗಿದ ಜೈ ಭವಾನಿ ಮಾತಾ ಮಂದಿರ ದ್ವಿತೀಯ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಮಕ್ಕಳಿಗಾಗಿ ತಂದೆ-ತಾಯಿ ತಮ್ಮ ಸರ್ವಸ್ವ ತ್ಯಾಗ ಮಾಡುತ್ತಾರೆ. ಹೀಗಾಗಿ ವೃದ್ಧಾಪ್ಯದಲ್ಲಿ ಮಕ್ಕಳು ಅವರಿಗೆ ಆಸರೆಯಾಗಬೇಕು. ಅವರೊಂದಿಗೆ ಗೌರವಯುತವಾಗಿ ನಡೆದುಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ದಯವೇ ಸಕಲ ಧರ್ಮಗಳ ತಿರುಳಾಗಿದೆ. ಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು. ಜನ್ಮ ದಿನ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡುವ ಬದಲು ನಿರ್ಗತಿಕರಿಗೆ ಅನ್ನ ದಾಸೋಹ ಮಾಡಬೇಕು. ಈ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು. ಸತ್ಯ, ನ್ಯಾಯ, ನೀತಿ, ಧರ್ಮದ ಮಾರ್ಗದಲ್ಲಿ ನಡೆಯಬೇಕು. ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಗ್ರಾಮದ ಪ್ರಮುಖರಾದ ಕಾಶೀನಾಥ ಮಹಾರಾಜವಾಡೆ, ಶಿವರಾಜ ವಡಗಾವೆ, ಶಿವಕುಮಾರ ಅಲ್ಲಂಕೆರೆ, ಪ್ರಕಾಶ ಅಲ್ಲೂರೆ, ನಾಗಶೆಟ್ಟಿ ಮಹಾರಾಜವಾಡೆ, ನಾಗಶೆಟ್ಟಿ ಪೊಲೀಸ್ಪಾಟೀಲ್, ಶರಣಪ್ಪ ಭೂಶೆಟ್ಟಿ, ರಾಜಕುಮಾರ ಮೇತ್ರೆ ಇತರರಿದ್ದರು.

ಇದಕ್ಕೂ ಮೊದಲು ಗ್ರಾಮದ ಶಿವಾಜಿ ವೃತ್ತದಿಂದ ಮಂದಿರದವರೆಗೆ ಶ್ರೀ ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು. ಕುಂಭ ಕಲಷ ಹೊತ್ತ ಮಹಿಳೆಯರು, ನಿರಗುಡಿಯ ಪೊಗರು ಡೊಳ್ಳು ಕುಣಿತ ಮೆರವಣಿಗೆಯ ಆಕರ್ಷಣೆಯಾಗಿದ್ದವು. ನೂರಾರು ಜನ ಶ್ರದ್ಧೆ, ಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net