

ಯಾದಗಿರಿ: ಕಲಿಯುಗದ ಕಾಮಧೇನು ಶ್ರೀಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಶುಕ್ರವಾರ ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಹಾಗೂ ಸ್ಟೇಷನ್ ಏರಿಯಾದ ಯಾಜ್ಞವಲ್ಕ್ಯ ಬಡಾವಣೆಯಲ್ಲಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಿತು.
ಮಧ್ಯಾರಾಧನೆ ನಿಮಿತ್ತ ರಥೋತ್ಸವ ಜರುಗಿತು. ಈ ವೇಳೆ ನಗರದ ನೂರಾರು ಭಕ್ತರು ಆಗಮಿಸಿ ರಾಯರ ದರ್ಶನ ಪಡೆದು ಪುನೀತರಾದರು. ಬೆಳಗ್ಗೆ ಸುಪ್ರಭಾತ, ನಿಮರ್ಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಹರಿಕಥಾಮೃತ ಸಾರ, ಶ್ರೀ ವಿಷ್ಣು ಸಹಸ್ರನಾಮ ಅರ್ಚನೆ, ಪಾದಪೂಜೆ, ಕನಕಾಭಿಷೇಕ, ನೈವೇದ್ಯ, ಅಲಂಕಾರ ಪೂಜೆ, ಹಸ್ತೋದಕ, ರಥಾಂಗಹೋಮ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಜರುಗಿತು.
ಅಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಸಂಜೆ ಭಜನೆ, ಸಂಗೀತ, ಕಾರ್ಯಕ್ರಮ ನಡೆದವು. ಆರಾಧನೆ ಅಂಗವಾಗಿ ಗುರು ರಾಯರ ವೃಂದಾವನವನ್ನು ನಾನಾ ಹೂಗಳಿಂದ ಅಲಂಕರಿಸಲಾಗಿತ್ತು. ಸಹಸ್ರಾರು ಭಕ್ತರು ಮಠಕ್ಕೆ ತೆರಳಿ ಗುರು ರಾಯರ ವೃಂದಾವನಕ್ಕೆ ನಮಿಸಿದರು. ಶ್ರೀರಾಮ ಭಜನಾ ಮಂಡಳಿ ಹಾಗೂ ಗುರುರಾಜ ಭಜನಾ ಮಂಡಳಿಗಳಿಂದ ವಿಶೇಷ ಭಜನಾ ಕಾರ್ಯಕ್ರಮ ಜನಮನ ಸೆಳೆಯಿತು.
ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪಕ್ಕೆ ಶಾಸಕ ಚನ್ನಾರಡ್ಡಿ ಪಾಟೀಲ್ ತೆರಳಿ ವೃಂದಾವನದ ದರ್ಶನ ಪಡೆದುಕೊಂಡರು. ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ಗುರು ಸಾರ್ವಭೌಮರು ನಾಡಿಗೆ ಒಳಿತನ್ನು ಉಂಟು ಮಾಡಲಿ ಎಂದು ಪ್ರಾಥರ್ಿಸಿದರು.