

ಕೊಟ್ಟೂರು: ಪಟ್ಟಣದ ಗಚ್ಚಿನಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1968-74ನೇ ಸಾಲಿನಲ್ಲಿ 7ನೇ ತರಗತಿವರೆಗೆ ಓದಿದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ ಹಾಗೂ ಸುವರ್ಣ ಮಹೋತ್ಸವ ಫೆ 16ರಂದು ಅದ್ದೂರಿಯಾಗಿ ಆಯೋಜಿಸಲಾಗುವುದು ಎಂದು ಸುವರ್ಣಮಹೋತ್ಸವ ಸಮಿತಿ ಅಧ್ಯಕ್ಷ ಬಸಾಪುರ ಪಂಪಾಪತಿ ಹೇಳಿದರು.
ಗಚ್ಚಿನಮಠ ಶಾಲೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿದರು. ಫೆ. 16ರಂದು ಬೆಳಗ್ಗೆ 10ಕ್ಕೆ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಕಾರ್ಯಕ್ರಮದ ಸಂಯೋಜಕ ದೇವರಮನಿ ಚಾಮರಸ ಮಾತನಾಡಿ. ಗುರು-ಶಿಷ್ಯರ ನಡುವಿನ ಸಂಬಂಧ ಸ್ಮರಣೆ, ಸ್ನೇಹಿತರ ಬಾಲ್ಯದ ತುಂಟಾಟಗಳನ್ನು ಸ್ಮರಿಸುವ ಮೂಲಕ, ಸ್ನೇಹ ಅನುಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಮಿತಿ ಗೌರವ ಅಧ್ಯಕ್ಷ ದೊಡ್ಡ ರಾಮಣ್ಣ ಮಾತನಾಡಿ, ಶಾಲೆಯ ಹಳೆಯ ಶಿಕ್ಷಕರು ಹಾಗೂ ಈಗಿನ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಖಾಸಿಮ್ ಸಾಹೇಬ್, ಮುದುಕಪ್ಪ, ಕೊಟ್ರೇಶಣ್ಣ, ಸುರೇಶ್ ಗೌಡ್ರು ಇತರರಿದ್ದರು.