ಗುರು ಪರಂಪರೆಗೆ ಶರೀಫರು ಮಾದರಿ

4 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗುರು ಶಿಷ್ಯ ಪರಂಪರೆಗೆ ಮಾದರಿ ಸಂತ ಶಿಶುನಾಳ ಶರೀಫರು ಎಂದು ಶಿಕ್ಷಕ ಪ್ರಕಾಶ ಕಂಬಳಿ ಹೇಳಿದರು.
ನಗರದ ಜಾನಪದ ಸಂಶೋಧನ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಗುರು ಪೂರ್ಣಿಮೆ ಹಾಗೂ ಸಂತ ಶಿಶುನಾಳ ಶರೀಫರ 204ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಲಿಂಗಯ್ಯ ಹಿರೇಮಠ ನನ್ನ ಸಂಗೀತ ಗುರು. ಅವರು ಹಾಡಿದ ಶರೀಫರ ಹಾಡುಗಳನ್ನು ಕೇಳುತ್ತಲೇ ಬೆಳೆದವ. ಇಂದು ಪರಿಸ್ಥಿತಿ ಬದಲಾಗಿದೆ. ತಂದೆ-ತಾಯಿ ಮತ್ತು ಗುರುಗಳನ್ನು ಆರಾಧಿಸುವರು ಕಡಿಮೆಯಾಗಿದ್ದಾರೆ. ಹೀಗಾಗಿ ಯುವ ಪೀಳಿಗೆಗೆ ಸಂಸ್ಕಾರ ನೀಡುವ ಕೆಲಸವಾಗಬೇಕು ಎಂದರು.
ಪರಿಸರವಾದಿ ಶಂಕರ ಕುಂಬಿ ಮಾತನಾಡಿ, ಸಂಗೀತಗಾರರಿಗೆ ಮತ್ತು ಜಾನಪದ ಕಲಾವಿದರಿಗೆ ಇರುವಷ್ಟು ಗೌರವ ಸಮ್ಮಾನ ಬೇರೆ ಯಾರಿಗೂ ಇಲ್ಲ. ಅವರ ಶಿಷ್ಯ ಬಳಗ ತಲೆಬಾಗಿ ಗುರುಗಳಿಗೆ ನಮಸ್ಕರಿಸುತ್ತಾರೆ. ಗುರು ಗೋವಿಂದ ಭಟ್ಟರು ಹಾಗೂ ಶರೀಫರ ಸಂಬಂಧ ದೊಡ್ಡ ಪರಂಪರೆ ನೀಡಿದೆ. ಜಾನಪದ ಸಂಶೋಧನ ಕೇಂದ್ರದ ಸದಸ್ಯರು ತಮ್ಮ ಗುರು ಬಸವಲಿಂಗಯ್ಯ ಹಿರೇಮಠರಿಗೆ ಗುರುಪೂರ್ಣಿಮೆ ನಿಮಿತ್ತ ಸಲ್ಲಿಸಿದ ಗೌರವ ಬಹಳ ಅರ್ಥಪೂರ್ಣವಾಗಿದ್ದು, ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಸಿನಿಮಾ ಕಲಾವಿದ ಬಸವರಾಜ ಮುರಗೋಡ ಮಾತನಾಡಿದರು. ಜಾನಪದ ಸಂಶೋಧನ ಕೇಂದ್ರದ ಕಲಾಬಳ ಸದಸ್ಯರು ಶರೀಫರ ಹಾಡುಗಳನ್ನು ಪ್ರಸ್ತುತಪಡಿಸಿದರು. ಆಶಾ ಸಯ್ಯದ, ಖೈರನ್ನಿಸ, ಗಿರಿಜಾ ಶಕ್ಕಿ, ಇಂದಿರಾ ಶಶಿಧರ, ವಿಜಯಾ ಧಡೂತಿ, ಸೀತಾ ಸಾತಿಹಾಳ, ಭುವನೇಶ್ವರಿ, ಮೈನಾ ದೇಸಾಯಿ, ಕಲಾವತಿ ಹೂಗಾರ, ವೀಣಾ ಹಿರೇಮಠ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ್, ಎಂ.ಎಸ್. ಮಲ್ಲಾಡದ, ಪಂಚಾಕ್ಷರಿ ಹಿರೇಮಠ, ಇತರರು ಇದ್ದರು.
ಜಾನಪದ ಸಂಶೋಧನ ಕೇಂದ್ರದ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಭೂಷಣ ಹಿರೇಮಠ ನಿರೂಪಿಸಿದರು. ಡಾ. ಪ್ರಭಾ ನೀರಲಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net