

ಚಿತ್ರದುರ್ಗ: ಎಲ್ಲ ಕ್ಷೇತ್ರಗಳಲ್ಲೂ ಜ್ಞಾನಾರ್ಜನೆ ಮೂಲಕ ಅಭಿವೃದ್ಧಿಗೆ ಕಾರಣವಾದ ಗುರು ಪರಂಪರೆಯ ಕೊಡುಗೆ ಅಪಾರವಾದುದು. ಇದರ ಮಹತ್ವ ಅರಿತ ಶಿಷ್ಯರು ಸುಂದರ ಭವಿಷ್ಯ ರೂಪಿಸಿಕೊಳ್ಳಬಲ್ಲರು ಎಂದು ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಸಲಹೆ ನೀಡಿದರು.
ಹೊರವಲಯದ ಭೋವಿ ಗುರುಪೀಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಮಾನವನ ಬೆಳವಣಿಗೆಗೆ ಜ್ಞಾನ ಮುಖ್ಯವಾದ ಪಾತ್ರವಹಿಸುತ್ತದೆ. ಶಿಷ್ಯರನ್ನು ಹಂತ-ಹಂತವಾಗಿ ಸೃಜನಶೀಲರನ್ನಾಗಿಸಿ, ಮುನ್ನಡೆಸುವ ಮಹಾನ್ ಶಕ್ತಿ ಗುರುವಿನಲ್ಲಿದೆ ಎಂದರು.
ಪ್ರತಿ ಯುಗದಲ್ಲೂ ಸಮಾಜ ಪರಿವರ್ತಿಸಲು, ಸನ್ಮಾರ್ಗದಲ್ಲಿ ಕೊಂಡೊಯ್ಯಲು ಗುರು ಪರಂಪರೆಯ ಕಾರ್ಯ ಅವಿಸ್ಮರಣೀಯ. ಮೌಖಿಕ ಜ್ಞಾನದಿಂದ ಪ್ರಸ್ತುತ ಕಾಲದವರೆಗೆ ಜ್ಞಾನದಾಸೋಹ ಉಣಬಡಿಸಿ ಸದೃಢ ಶಕ್ತಿಯಾಗಿ ನಿಂತಿದ್ದಾರೆ ಎಂದು ಬಣ್ಣಿಸಿದರು.
ಭೋವಿ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಜಯಣ್ಣ, ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಗುರುಕುಲದ ವಿದ್ಯಾರ್ಥಿಗಳು ಇದ್ದರು.