ಗುರು ತೋರಿದ ದಾರಿಯಲ್ಲಿ ಜೀವನದ ತೇರು ಎಳೆಯಿರಿ: ರಾಮಚಂದ್ರ ಶಾಸ್ತ್ರಿ ಹೇಳಿಕೆ

19_HSN_04
Published on

ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಯುಗ ಯೋಗಿ, ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಡಾ.ಬಾಲ ಗಂಗಾಧರನಾಥ ಮಹಾಸ್ವಾಮೀಜಿ ಅವರ ಸಂಸ್ಮರಣಾರ್ಥ ನಡೆಸಿಕೊಂಡು ಬರುತ್ತಿರುವ ಗುರು ತೋರಿದ ದಾರಿ ತಿಂಗಳ ಮಾಮನ ತೇರಿನ 128ನೇ ಹುಣ್ಣಿಮೆಯ ಕಾರ್ಯಕ್ರಮದ ಅಂಗವಾಗಿ 7 ದಿನಗಳ ಕಾಲ ನಡೆದ ಆಧ್ಯಾತ್ಮಿಕ ಚಿಂತನ ಶಿಬಿರದ ಸಮಾರೋಪ ಸಮಾರಂಭವು ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಈಚೆಗೆ ಜರುಗಿತು.

ಮಹಾರಾಷ್ಟ್ರದ ಸಂಸ್ಕೃತ ವಿದ್ಯಾ ಸಾಹಿತ್ಯ ಪ್ರವೀಣರಾದ ವಿದ್ವಾನ್ ಶ್ರೀ ರಾಮಚಂದ್ರ ಶಾಸ್ತ್ರಿ ಅವರು ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಗುರು ತೋರಿದ ದಾರಿಯಲ್ಲಿ ನಮ್ಮ ಜೀವನವೆಂಬ ತೇರನ್ನು ನಡೆಸಿದರೆ ಯಾವುದೇ ವಿಘ್ನಗಳು ಎದುರಾಗುವುದಿಲ್ಲ ಎಂಬುದನ್ನು ಯಾರೂ ಮರೆಯಬಾರದು, ಗುರುವಿನ ಸತ್ಸಂಗ ನಮ್ಮನ್ನು ಪರಮಾತ್ಮನೆಡೆಗೆ ಕರೆದೊಯ್ಯುತ್ತದೆ ಎಂದರು.

ಗುರುವಿಗೆ, ಗುರುತ್ವಕ್ಕೆ ಇರುವ ಶಕ್ತಿಯನ್ನು ಯಾರು ಅಲಕ್ಷ್ಯ ಮಾಡಬಾರದು. ಮನಸ್ಸಿನಲ್ಲಿ ಗುರುವಿನ ಬಗೆಗೆ ಪೂಜ್ಯ ಭಾವನೆ ಮೂಡಿಸಿಕೊಂಡು, ಗುರು ತೋರುವ ಸನ್ಮಾರ್ಗದಲ್ಲಿ ನಡೆದು, ನಮ್ಮಲ್ಲಿ ಮೂಡುವ ಜ್ಞಾನವನ್ನು ಪಸರಿಸುವ ಕೆಲಸ ಮಾಡಿಕೊಂಡು ಹೋದಾಗ ಮಾತ್ರ ಈ ಬದುಕಿಗೆ ಅರ್ಥ ಸಿಗಲಿದೆ. ಮನುಷ್ಯ ಯಾವುದರಿಂದ ತನ್ನ ಧಾರಣೆಯಾಗುತ್ತದೆ ಎಂಬುದನ್ನು ಅರಿಯಬೇಕು. ಸತ್ಯ, ದಾನ, ದಯಾ, ತಪಸ್ಸು ನಮ್ಮೊಳಗೆ ರೂಢಿಸಿಕೊಂಡು ಬಂದರೆ ಆತನಿಗೆ ಮೋಕ್ಷ ದೊರೆಯಲಿದೆ. ಆತ ಸಮಾಜ ಹಾಗೂ ಭಗವಂತನಿಗೆ ಹತ್ತಿರವಾಗಿ ಬದುಕಿ ಸಮಾಜದಲ್ಲಿ ಶಾಶ್ವತನಾಗಿ ಉಳಿಯುತ್ತಾನೆ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಬಾಗಲಕೋಟೆಯ ಮಹಲಿಂಗಪುರದ ಶ್ರೀಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಶ್ರೀ ಸಹಜಾನಂದ ಸ್ವಾಮಿಗಳು, ಡಾ.ಎಚ್.ಎಲ್ ಮಲ್ಲೇಶಗೌಡ, ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ, ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ತುಳಸಿಗೆರೆ ಮಠದ ಶ್ರೀ ರಮಾನಂದ ಸ್ವಾಮೀಜಿ, ಯೋಗಗುರು ರನ್ನ ಬೆಳಗಲಿಯ ಶ್ರೀ ಸದಾಶಿವ ಸ್ವಾಮೀಜಿ, ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ. ಮದನಗೌಡ, ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net