

ಹಾಸನ: ಗುರು ತೋರಿದ ದಾರಿ ತಿಂಗಳ ಮಾಮನ ತೇರಿನ 116ನೇ ಪವಿತ್ರ ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ನಗರದ ಮಠದ ವತಿಯಿಂದ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಸಾಂಗವಾಗಿ ನೆರವೇರಿತು.
ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹುಣ್ಣಿಮೆಯಂದು ನಡೆದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕೈಂಕರ್ಯದಲ್ಲಿ 200ಕ್ಕೂ ಹೆಚ್ಚು ದಂಪತಿಗಳು ಪಾಲ್ಗೊಂಡು ಭಕ್ತಿ ಭಾವ ಮೆರೆದು ದೇವರ ಅನುಗ್ರಹಕ್ಕೆ ಪಾತ್ರರಾದರು.
ಪೂಜೆ ಆರಂಭಕ್ಕೂ ಮುನ್ನ ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿಯವರು ವಾದ್ಯವೃಂದದೊಂದಿಗೆ ಸುಶ್ರಾವ್ಯವಾದ ಭಜನೆ ನಡೆಸಿಕೊಟ್ಟು ಭಕ್ತಿ ಪರವಶರಾಗುವಂತೆ ಮಾಡಿದರು.ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಕಲ್ಪದೊಂದಿಗೆ ಪೂಜಾ-ವಿಧಿವಿಧಾನಗಳು ಜರುಗಿದವು.
ಗಣಪತಿ ಪೂಜೆ,ಕಳಸ ಪೂಜೆ,ನವಗ್ರಹ ಪೂಜೆ, ಗುರು ಪೂಜೆ,ಸತ್ಯನಾರಾಯಣ ದೇವರ ವೃತ ಕಲ್ಪೋಕ್ತಿ ಪೂಜೆ, ಭಜನೆ ಸಂಕೀರ್ತನೆ,ಕಥಾಪರಾಯಣದ ನಂತರ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿತು. ಡಾ.ಕೃಷ್ಣಮೂರ್ತಿ ಜಿ.ಕೂರ್ಸೆ ಸತ್ಯನಾರಾಯಣಸ್ವಾಮಿ ಕಥಾಪಾರಾಯಣ ನಡೆಸಿಕೊಟ್ಟರು.
ಕಾರ್ಯಕ್ರಮದ ನಂತರ ಭಕ್ತ ಸಮೂಹಕ್ಕೆ ಶ್ರೀ ಮಠದ ವತಿಯಿಂದ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲೂಕಿನ ಕುಂಚಟಿಗರ ಮಹಾಸಂಸ್ಥಾನ ಮಠದ ಡಾ.ಹನುಮಂತನಾಥ ಸ್ವಾಮೀಜಿ,ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ದಸರಿಘಟ್ಟ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ, ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್ ಮುದ್ದೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಶ್ರೀ ಮಠದ ವ್ಯವಸ್ಥಾಪಕ ಎಚ್.ಕೆ ಚಂದ್ರಶೇಖರ್ ಇತರರು ಹಾಜರಿದ್ದರು.