ಗುರು-ಗುರಿ ಇದ್ದಲ್ಲಿ ಪ್ರಗತಿ

9-SanduruP1
Published on

ಸಂಡೂರು: ಜೀವನದಲ್ಲಿ ಗುರಿ ಹಾಗೂ ಗುರು ಇದ್ದಲ್ಲಿ ಮಾತ್ರ ಪ್ರಗತಿ ಸಾಧ್ಯ. ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್ ತಿಳಿಸಿದರು.

ಪಟ್ಟಣದ ಗುರು ಭವನದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ತಾಲೂಕು ಘಟಕಂದ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ, ಸಂಡೂರು ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು.

ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಅಧ್ಯಕ್ಷ ಕೆ.ಕುಮಾರಸ್ವಾಮಿ ಮಾತನಾಡಿ, ಸುಮಾರು 30 ವರ್ಷಗಳಿಂದ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿಲ್ಲ. ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆನ್ನುವ ಬೇಡಿಕೆ ಹಾಗೆಯೇ ಇದೆ. ಖಾಸಗಿ ಶಾಲೆಗಳೂ ಶಿಕ್ಷಕರ ಕಲ್ಯಾಣ ನಿಧಿಗೆ ಹಣವನ್ನು ತುಂಬಿದರೂ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಈ ನಿಧಿಯಿಂದ ಯಾವುದೇ ಸಹಾಯಧನ ದೊರೆಯುತ್ತಿಲ್ಲ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ಜಗಳೂರಿನ ನಿವೃತ್ತ ಉಪನ್ಯಾಸಕ ಜಿ.ಎಸ್.ಸುಭಾಷ್‌ಚಂದ್ರ ಬೋಸ್, ರೋಟರಿ ಟ್ರಸ್ಟ್ ಅಧ್ಯಕ್ಷೆ ರೂಪಾ ಯು.ಲಾಡ್, ಬಿಇಒ ಡಾ.ಐ.ಆರ್.ಅಕ್ಕಿ, ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕರಿಶೆಟ್ಟಿ, ಪುರಸಭೆ ಉಪಾಧ್ಯಕ್ಷೆ ಎಂ.ಸಿ. ಲತಾ ಉಜ್ಜಪ್ಪ, ಪಿ.ಎಂ.ಪೋಷಣ್ ಯೋಜನೆಯ ಉಪ ನಿರ್ದೇಶಕ ಶ್ರೀಧರ್‌ಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುದೇವಯ್ಯ, ಖಾಸಗಿ ಶಿಕ್ಷಕರ ಬಳಗದ ಅಧ್ಯಕ್ಷ ಟಿ.ಎಂ.ಪುರುಷೋತ್ತಮ ಮಾತನಾಡಿದರು.

ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ತಾಲೂಕಿನ ವಿವಿಧ ಖಾಸಗಿ ಶಾಲೆಗಳ 31 ಶಿಕ್ಷಕರಿಗೆ ‘ಸಂಡೂರು ಶಿಕ್ಷಣ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ನೀಲಕಂಠಾಚಾರಿ ಕಮ್ಮಾರ್, ವರ್ಷಾ ಜಿ.ಪಟೇಲ್, ಹನುಮೇಶ್, ಎಂ.ಡಿ.ರಮೇಶ್, ಪರಶುರಾಮ್, ಹುಲುಗಪ್ಪ ನಿರ್ವಹಿಸಿದರು.

ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಎಂ.ಮಹಾಂತೇಶ್, ಖಜಾಂಚಿ ನಾಗರಾಜ, ಖಾಸಗಿ ಶಿಕ್ಷಕರ ಸಂಘದ ಅಧ್ಯಕ್ಷ ಫಿರೋಜ್, ವಿವಿಧ ಶಿಕ್ಷಕರ ಸಂಘಗಳ ಪ್ರಮುಖರಾದ ಚೌಕಳಿ ಪರಶುರಾಮಪ್ಪ, ಪ್ರೇಮಾ, ಷಣ್ಮುಖರಾವ್, ಬಿ.ಎಂ.ಶಶಿಧರ, ಜೆಸಿಐ ವಲಯ ಅಧಿಕಾರಿ ಲಿಂಗರಾಜ್, ವಿವಿಧ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು, ಪ್ರಶಸ್ತಿ ಪುರಸ್ಕೃತರ ಕುಟುಂಬದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net