

ಕೂಡ್ಲಿಗಿ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮೌಲ್ಯಗಳನ್ನು ಕಲಿಯಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ, ತಿರುಕಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ವಿದ್ಯೆಗೆ ಪ್ರಾಮುಖ್ಯ ನೀಡದೆ, ಬೇಡದ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇರುವ ಸೌಲಭ್ಯಗಳಲ್ಲಿಯೇ ನಿರ್ದಿಷ್ಟ ಗುರಿಯೊಂದಿಗೆ ಅಭ್ಯಾಸ ಮಾಡಬೇಕು. ಇಲ್ಲದಿದ್ದಲ್ಲಿ ಯಶಸ್ಸು ಲಭಿಸುವುದು ಕಷ್ಟ ಎಂದರು.
ಗ್ರಾಮೀಣ ವಿದ್ಯಾರ್ಥಿಗಳ ಪಾಲಕರು ಕೂಲಿ ಮಾಡಿ ಭರಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ಮೋಜು, ಮಸ್ತಿಗೆ ಮಾರುಹೋಗುವುದು ಸರಿಯಲ್ಲ. ಕಾಲೇಜಿನಲ್ಲಿ ಬೋಧನೆ ಹಾಗೂ ಇತ್ಯಾದಿ ಸೌಲಭ್ಯಗಳು ಬೇಕಿದ್ದರೆ ನನಗೆ ತಿಳಿಸಿದರೆ ವ್ಯವಸ್ಥೆ ಮಾಡುತ್ತೇನೆ. ಉತ್ತಮ ಅಭ್ಯಾಸ ಮಾಡಿ, ಉನ್ನತ ಹುದ್ದೆ ಅಲಂಕರಿಸಿ ಸಮಾಜದ ಮುಖ್ಯವಾಹಿನಿ ಬರುವಂತೆ ಸಲಹೆ ನೀಡಿದರು.
ಪ್ರಾಚಾರ್ಯ ಎಸ್.ಷಣ್ಮುಖನ ಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಅವಶ್ಯವಿರುವ ಬೋಧನೆ, ವಿಜ್ಞಾನ ಪ್ರಯೋಗಾಲಯ ಕೊಠಡಿ, ಕಾಂಪೌಂಡ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಶಾಸಕರು ಒದಗಿಸಿದ್ದಾರೆ. ವಿಜ್ಞಾನ, ವಾಣಿಜ್ಯ ವಿಭಾಗಗಳನ್ನೂ ಆರಂಭಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಕಾಲೇಜಿನ ಭೂದಾನಿಗಳ ಕುಟುಂಬದ ವೀರೇಶ್ ಅಂಗಡಿ, ಪಪಂ ಮುಖ್ಯಾಧಿಕಾರಿ ದಾದಾಪೀರ್, ಲೋಕೋಪಯೋಗಿ ಇಲಾಖೆ ಎಇಇ ಕೆ.ನಾಗನಗೌಡ, ಉಪನ್ಯಾಸಕರಾದ ಅನಿಲ್ ಕುಮಾರ್, ಡಿ.ಜ್ಯೋತಿ, ಪ್ರಶಾಂತ ಕುಮಾರ್, ಕಾವ್ಯಾ,ಮಾರಯ್ಯ, ತಾತಪ್ಪ, ಅಧೀಕ್ಷಕಿ ಇಂದಿರಾ ಇತರರಿದ್ದರು.