

ಹುಬ್ಬಳ್ಳಿ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರಿಗೆ ಜೆಡಿಎಸ್ ಬೆಂಬಲ ಘೊಷಿಸುವ ಮೂಲಕ ಚುನಾವಣೆ ಕಣ ತ್ರಿಕೋನ ಸ್ಪರ್ಧೆಗೆ ಅಣಿಯಾಗಿದೆ.
ಇಲ್ಲಿಯವರೆಗೆ ಬಿಜೆಪಿಯ ಎಸ್.ವಿ. ಸಂಕನೂರ ಹಾಗೂ ಕಾಂಗ್ರೆಸ್ಸಿನ ಕುಬೇರಪ್ಪ ನಡುವೆ ನೇರ ಸ್ಪರ್ಧೆಯೆಂದೇ ಭಾವಿಸಲಾಗಿತ್ತು. ಇದೀಗ ಜೆಡಿಎಸ್ ನಡೆಯಿಂದ ತ್ರಿಕೋನ ಸ್ಪರ್ಧೆಯ ಕಣವಾಗಿ ಮಾರ್ಪಟ್ಟಿದೆ. ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ವಿಧಾನ ಪರಿಷತ್ಗೆ ಆಯ್ಕೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಗುರುವಾರ ಮನವಿ ಮಾಡಿರುವುದು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶಿವಶಂಕರ ಕಲ್ಲೂರ ಅವರಿಗೆ ಅಚ್ಚರಿ ತಂದಿದೆ. ಈಗಾಗಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕಲ್ಲೂರ ಅವರನ್ನು ಪೇಚಿಗೆ ಸಿಲುಕಿಸಿದೆ.
ಜೆಡಿಎಸ್ ನಿಲುವು ‘ಅರ್ಥ’ಪೂರ್ಣ ನಡೆಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಲ್ಲೂರ ಅವರು ಚುನಾವಣೆಯಲ್ಲಿ ತಟಸ್ಥ ಧೋರಣೆಗೆ ಬಂದಿರುವ ಹಿನ್ನೆಲೆಯಲ್ಲಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ನೀಡಲಾಗಿದೆ. ಪಕ್ಷದ ತೀರ್ವನವನ್ನು ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಸೇರಿದಂತೆ ಎಲ್ಲರೂ ಬೆಂಬಲಿಸಿ ಎಂದು ಮನವಿ ಮಾಡಲಾಗಿದೆ.