ಗುರಿ ಸಾಧಿಸಲು ಬೇಕು ನಿರಂತರ ಪ್ರಯತ್ನ

26Bk2
 ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪನವರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಸಾಯಗಾಂವ, ಗುರುಪ್ರಸಾದ ಪಂಡಿತ, ಡಾ.ರವಿಶಂಕರ ಖಂಡ್ರೆ, ಬಸವರಾಜ ಸೇರಿ, ನೀಲೇಶ ಟೊಂಪೆ ಇದ್ದರು.
Published on

ಬಸವಕಲ್ಯಾಣ: ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟವಾದ ಗುರಿ ಇಟ್ಟುಕೊಳ್ಳಬೇಕು. ಇದನ್ನು ಸಾಧಿಸಲು ನಿರಂತರ ಪ್ರಯತ್ನ ಮಾಡಬೇಕು. ಅಂದಾಗ ಯಶಸ್ಸು ಕಾಣಲು ಸಾಧ್ಯವಿದೆ ಎಂದು ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪನವರ ಹೇಳಿದರು.

ನಗರದ ಬಸವಕೃಫಾ ಸೇವಾ ಸಂಘ ಟ್ರಸ್ಟ್ನ ಅಡಿಯಲ್ಲಿ ವಿಶ್ವಗುರು ಬೇಸಿಗೆ ಶಿಬಿರದಲ್ಲಿ ಶನಿವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭ್ಯಾಸದ ಜತೆಗೆ ಸ್ಪರ್ಧಾತ್ಮಕ ಮನೋಭಾವ ಹಾಗೂ ಆದರ್ಶ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳುವುದು ಮುಖ್ಯ. ಪ್ರತಿ ವಿದ್ಯಾರ್ಥಿಯೂ ಓದಿನ ಜತೆಗೆ ವಚನಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.

ವಿಜಯಪುರದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ನಮ್ಮ ಅರಿವೇ ಗುರುವಾಗಬೇಕು. ಆ ಅರಿವು ವೃದ್ಧಿಗೊಳ್ಳಲು ಗುರು ತೋರಿದ ದಾರಿಯಲ್ಲಿ ಸಾಗಬೇಕು ಎಂದರು.

ಕಾರ್ಯಕ್ರಮದ ಸಂಯೋಜಕ ಗುರುಪ್ರಸಾದ ಪಂಡಿತ ಮಾತನಾಡಿ, ಅಧ್ಯಾತ್ಮ, ಕ್ರೀಡೆ, ಮಹಾನ್ ಶರಣರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಶಿಬಿರ ಇದಾಗಿದೆ ಎಂದರು.

ಸಾಯಗಾಂವನ ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜೇಶ್ವರ ವೈದ್ಯಾಧಿಕಾರಿ ರವಿಶಂಕರ್ ಖಂಡ್ರೆ, ಬಸವರಾಜ ಸೇರಿ, ನೀಲೇಶ್ ಟೊಂಪೆ ಮಾತನಾಡಿದರು. ಶುಭಾಂಗಿ ಕಲ್ಯಾಣೆ, ಸಪ್ನಾ ಸದಾನಂದೆ, ಸುಮಿತ್ ಪಾಟೀಲ್, ರೇಣುಕಾ ಪಾಂಚಾಳ, ಸುಧಾರಣೆ ದೇಗಾಂವ, ಅನಿಲ ರಜಪುತ, ಗೋರಖನಾಥ ಮೇತ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net