ಗುರಿ ಸಾಧನೆಯತ್ತ ಇರಲಿ ಚಿತ್ತ

Devaraj Arasu
Published on

ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಗುರಿ ಇರಬೇಕು. ಆಗ ಮಾತ್ರ ಸಾಧನೆಯೊಂದಿಗೆ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ.ರಘುಚಂದನ್ ಸಲಹೆ ನೀಡಿದರು.

ಸಂಸ್ಥೆಯ ಎಸ್‌ಎಲ್‌ವಿ ಪದವಿ ಪೂರ್ವ ಕಾಲೇಜಿನಿಂದ ಮಂಗಳವಾರ ಹಮ್ಮಿಕೊಂಡಿದ್ದ ಪರಿಣಿತ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತು ಬದ್ಧ ಜೀವನವಿದ್ದರೆ, ಉನ್ನತ ಸ್ಥಾನ ಅಲಂಕರಿಸಬಹುದು. ಪಾಲಕರ ಮಹದಾಸೆಗೆ ತಕ್ಕಂತೆ ಚೆನ್ನಾಗಿ ಓದಿ ಹೆಚ್ಚು ಅಂಕಪಡೆದು ಕೀರ್ತಿ ತನ್ನಿ. ಗುರು-ಹಿರಿಯರಲ್ಲಿ ಗೌರವ, ದೇವರಲ್ಲಿ ಭಕ್ತಿ, ಸನ್ಮಾರ್ಗದೊಂದಿಗೆ ಪರೋಪಕಾರ ಗುಣ ಮೈಗೂಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಆರ್.ಎಸ್.ರಾಜು ಮಾತನಾಡಿ, ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವುದು ಇತರರಿಗೆ ಪ್ರೇರಣೆ ಇದ್ದಂತೆ. ದ್ವಿತೀಯ ಪಿಯುಸಿ ಜೀವನದ ಅತ್ಯಂತ ಮಹತ್ತರ ಘಟ್ಟ. ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಕ್ಕೆ ಹೋಗಬೇಕೆಂದೇನೂ ಇಲ್ಲ. ವಿವಿಧ ಕೋರ್ಸ್‌ಗಳಿದ್ದು, ಕಠಿಣ ಪರಿಶ್ರಮ, ಸತತ ಅಧ್ಯಯನ ಉನ್ನತ ಸ್ಥಾನಮಾನದತ್ತ ಕೊಂಡೊಯ್ಯಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷೆ ಬೇಡ ಎಂದು ಹೇಳಿದರು.

ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಸಿ.ಅನಂತರಾಮ್ ಮಾತನಾಡಿ, ಪಾಲಕರಿಗಿಂತ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಶಿಕ್ಷಣದ ಜೊತೆಗೆ ನಿಮ್ಮಲ್ಲಿನ ಪ್ರತಿಭೆ ಅನಾವರಣಗೊಳಿಸಿ ಎಂದರು.

ವೆಂಕಟೇಶ್ವರ ಕಾಲೇಜ್ ಆಫ್ ಎಜುಕೇಷನ್‌ನ ಸಹಾಯಕ ಪ್ರಾಧ್ಯಾಪಕ ವಿ.ಪ್ರಕಾಶ್, ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯ ಆಂಟೋನಿ ಮ್ಯಾಥ್ಯೂ, ಸಂಸ್ಥೆಯ ಸ್ಟೇಟ್ ಶಾಲೆಯ ಪ್ರಾಚಾರ್ಯ ತಿಪ್ಪೇಸ್ವಾಮಿ, ಎಸ್‌ಎಲ್‌ವಿ ಪಪೂ ಕಾಲೇಜಿನ ಕೇಶವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net