

ಚಿತ್ರದುರ್ಗ: ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಲು ಚಿಕ್ಕಂದಿನಿಂದಲೇ ಶ್ರಮ ಹಾಕಬೇಕು. ಅದಕ್ಕಾಗಿ ಅಗತ್ಯ ತಯಾರಿ ನಡೆಸಿ, ಜೀವನದಲ್ಲಿ ಪ್ರಗತಿ ಹೊಂದಬೇಕು ಎಂದು ಮುಂಬೈನ ಸಂಜಯ್‌ಗಾಂಧಿ ನ್ಯಾಷನಲ್ ಪಾರ್ಕ್‌ನ ನಿರ್ದೇಶಕ, ಅರಣ್ಯ ಇಲಾಖೆ ಮುಖ್ಯ ಅಧೀಕ್ಷಕ ಜಿ.ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಹೊಳಲ್ಕೆರೆ ಪಟ್ಟಣದ ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಭಾವಿ ಪ್ರಜೆಗಳಾದ ನಿಮಗೆ ಸರಿಯಾದ ಮಾರ್ಗದರ್ಶನ ನೀಡಿದರೆ, ಉತ್ತಮ ಪ್ರಜೆಗಳಾಗುವುದರಲ್ಲಿ ಯಾವ ಸಂಶಯವಿಲ್ಲ. ರಾಷ್ಟ್ರಭಕ್ತಿ ಮೈಗೂಡಿಸಿಕೊಂಡು ಪ್ರಗತಿಯತ್ತ ಕೊಂಡೊಯ್ಯಲು ಕೈಜೋಡಿಸಿ ಎಂದರು.
ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಶೈಕ್ಷಣಿಕ ವಾತಾವರಣದಲ್ಲೂ ಏಳು-ಬೀಳು ಸಹಜ. ಈ ಹಿನ್ನಲೆಯಲ್ಲಿ ಕಷ್ಟ ಬಂದಾಗ ಎದೆಗುಂದದೆ ಧೈರ್ಯದಿಂದ ಎದುರಿಸಿ. ಖಂಡಿತ ಫಲ ದೊರೆಯಲಿದೆ. ಯಾವುದೇ ಕೆಲಸವಾಗಲಿ ಪ್ರಾಮಾಣಿಕ, ನಿಷ್ಠೆಯಿಂದ ಮಾಡಿ. ಆಗ ಯಶಸ್ಸು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಸಾಧನೆಯ ಹಿಂದೆ ಪಾಲಕರು, ಶಿಕ್ಷಕರ ಶ್ರಮವಿದೆ. ಅದನ್ನು ಮರೆಯಬೇಡಿ. ದೊಡ್ಡ ಕನಸು ಕಂಡು ನನಸಾಗಿಸುವತ್ತ ದಾಪುಗಾಲಿಡಿ. ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಮುಂದಾಗಿ ಎಂದರು.
ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಹಾಲೇಶ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಪಠ್ಯ-ಪಠ್ಯೇತರ ಚಟುವಟಿಕೆಯತ್ತ ಹೆಚ್ಚು ಗಮನಹರಿಸಿ ಸುಂದರ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸ್ನೇಹ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಮುಂದೆ ಏನಾಗಬೇಕೆಂಬ ಗೊಂದಲ ಮಕ್ಕಳಲ್ಲಿ ಇರಬಾರದು. ಅದರ ನಿವಾರಣೆಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದಿನ ಪಾಲಕರು ತಮ್ಮ ಮಕ್ಕಳು ಇಂಜಿನಿಯರ್, ವೈದ್ಯರು ಆಗಬೇಕೆಂದು ಕನಸು ಕಾಣುತ್ತಾರೆ. ಆದರೆ, ಅವುಗಳನ್ನು ಹೊರತುಪಡಿಸಿ ಸಾಧಕರಾಗಲು ಸಾಕಷ್ಟು ಅವಕಾಶಗಳಿವೆ. ಅದರ ಬಗ್ಗೆಯೂ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದರು.
ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಪ್ರಸನ್ನ, ಶಾಲೆಯ ಕಾರ್ಯದರ್ಶಿ ವಸಂತ್, ಆಡಳಿತಾಧಿಕಾರಿ ಛಾಯಾ ಮಂಜುನಾಥ್ ಇತರರಿದ್ದರು.