ಗುರಿ ಸಾಧನೆಗೆ ಶ್ರದ್ಧೆ ಅಗತ್ಯ

IMG-20231030-WA0197
Published on

ಆಲೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುರಿ ಸಾಧನೆಗೆ ಶ್ರದ್ಧೆ ಅಗತ್ಯ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಒಕ್ಕಲಿಗರ ಸಂಘದ ವತಿಯಿಂದ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 11ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


ಪ್ರತಿಭೆಯೊಂದಿಗೆ ಆತ್ಮವಿಶ್ವಾಸವನ್ನೂ ಬೆಳೆಸಿಕೊಳ್ಳಬೇಕು. ವೈದ್ಯರು ಮತ್ತು ಎಂಜಿನಿಯರ್ ಆಗುವುದೇ ಬದುಕಿನ ಪರಮಗುರಿಯಾಗಬಾರದು. ಇಂದು ವಿವಿಧ ರಂಗಗಳಲ್ಲಿ ಆಕರ್ಷಕ ವೃತ್ತಿಗಳು ಪ್ರತಿಭಾವಂತರನ್ನು ಕೈ ಬೀಸಿ ಕರೆಯುತ್ತಿವೆ. ನಮ್ಮಲ್ಲಿರುವ ವಿಶೇಷ ಪ್ರತಿಭೆ ಮತ್ತು ಶಕ್ತಿಯನ್ನು ಗುರುತಿಸಿಕೊಂಡು ಬದುಕಿನಲ್ಲಿ ಮುನ್ನಡೆಯುವುದನ್ನು ಕಲಿಯಬೇಕು ಎಂದರು.


ರಾಜ್ಯ ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸಂಸ್ಕಾರವಿದ್ದರೆ ಅದೇ ಬಲದಿಂದ ಇತರರಿಗೆ ನೆರವಾಗುವ, ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಲು ಸಾಧ್ಯ. ಸಂಸ್ಕಾರ ಇಲ್ಲದ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅಲ್ಲಿ ಯಶಸ್ಸು ಸಿಗಲಾರದು. ಇಂದಿನ ಶಿಕ್ಷಣ ಕ್ಷೇತ್ರ ವಿಸ್ತಾರವಾಗಿದ್ದು, ಹೊಸ ಹೊಸ ಪ್ರಯೋಗಗಳಿಗೆ ಇಂದಿನ ವಿದ್ಯಾರ್ಥಿ ಸಮುದಾಯ ಆಸಕ್ತಿಯನ್ನು ತೋರಿದಾಗ ಉನ್ನತ ಸ್ಥಾನ ಲಭಿಸಲು ಸಾಧ್ಯವಿದೆ ಎಂದರು.


ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಸಂಸ್ಕಾರ, ಶಿಸ್ತು ರೂಢಿಸಿಕೊಳ್ಳಬೇಕು, ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸಬೇಕು. ಒಕ್ಕಲಿಗ ಸಂಘ ಹಲವು ವರ್ಷಗಳಿಂದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತೋಷದ ವಿಷಯ. ರಾಜ್ಯ ಒಕ್ಕಲಿಗ ಸಂಘ ಹಾಗೂ ಆದಿಚುಂಚನಗಿರಿ ಮಠ ದೇಶ ಹಾಗೂ ವಿದೇಶಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸಾಮಾನ್ಯರಿಗೆ ಸಹಕಾರಿಯಾಗಿದೆ ಎಂದರು.


ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ನಿರ್ದೇಶಕ ಬಾಗೂರು ಮಂಜೇಗೌಡ, ಸಹಕಾರಿ ರತ್ನ ಪ್ರಶಸ್ತಿ ವಿಜೇತ ಆರ್.ಟಿ. ದೇವೇಗೌಡ, ತಾಲೂಕು ಅಧ್ಯಕ್ಷ ಎಚ್.ಪಿ.ಮೋಹನ್, ಉಪಾಧ್ಯಕ್ಷ ಕೆ.ಎಸ್.ಮಂಜೇಗೌಡ, ಖಜಾಂಚಿ ಶಾಂತಕೃಷ್ಣ, ಕಾರ್ಯದರ್ಶಿ ವಿರೂಪಾಕ್ಷ, ಸಹ ಕಾರ್ಯದರ್ಶಿ ಕೆ.ವೈ.ಲೆಕ್ಕೆಗೌಡ ಸೇರಿದಂತೆ ನಿರ್ದೇಶಕರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net