

ಹಲಗೂರು: ಶಿಕ್ಷಣದ ಮುಖಾಂತರ ನಾವೆಲ್ಲರೂ ಸಾಧಕರಾದರೆ ದೇಶವನ್ನು ಸದೃಢಗೊಳಿಸಲು ಸಾಧ್ಯ. ಕೆಲಸದಲ್ಲಿ ಶ್ರದ್ಧೆ, ಸತತ ಪರಿಶ್ರಮ, ಗುರಿ ಇದ್ದರೆ ಸಾಧಕರಾಗಬಹುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಹಲಗೂರು ಹೋಬಳಿ ನಾಗರಿಕ ಹಿತರಕ್ಷಣಾ ಟ್ರಸ್ಟ್ ರೂವಾರಿ ಮಂಚೇಗೌಡರು 92ರ ವಯಸ್ಸಿನಲ್ಲೂ ಜನತೆಗೆ ಏನಾದರೂ ಮಾಡಬೇಕೆಂಬ ನಿಸ್ವಾರ್ಥ ಮನೋಭಾವನೆ ಉಳ್ಳವರಾಗಿದ್ದಾರೆ. ನಾನು ಈಗ ಅವರ ಅನುಯಾಯಿಯಾಗಿದ್ದೇನೆ. ನನ್ನನ್ನು ನಾನೇ ಪರಿವರ್ತಿಸಿಕೊಂಡು ಕಾರ್ಯಕ್ರಮಗಳಿಗೆ ನನ್ನನ್ನು ಸ್ವಾಗತಿಸುವಾಗ ಬಳಸುವ ಹಾರ, ಶಾಲು, ಪಟಾಕಿಗಳ ಬದಲು ನೋಟ್‌ಬುಕ್, ಬ್ಯಾಗ್, ಜಾಮಿಟ್ರಿ ಬಾಕ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಹಂಚುವ ಕೆಲಸವಾಗಬೇಕೆಂದು ನನ್ನ ಕಾರ್ಯಕರ್ತರಿಗೆ ತಿಳಿಸಿದ್ದೇನೆ ಎಂದರು.
ಸರ್ಕಾರದಿಂದ ಕೊಡುವ ಸೌಲಭ್ಯ ಹಾಗೂ ಈ ರೀತಿ ಸಮಾಜಸೇವೆ ಮಾಡುವುದು ಎರಡೂ ಬೇರೆಯಾಗಿದೆ. ವಿದ್ಯಾರ್ಥಿಗಳಿಗೆ ಅವಶ್ಯಕವಾದ ವಸ್ತುಗಳನ್ನು ಕೊಡುವುದರಿಂದ ಅನುಕೂಲವಾಗಲಿದೆ. ಈ ರೀತಿ ಸದುದ್ದೇಶದಿಂದ ಕೂಡಿದ ಕಾರ್ಯಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾಡಬೇಕು ಎಂದು ತಿಳಿಸಿದರು.
ನಾಗರಿಕ ಹಿತಾರಕ್ಷಣಾ ಟ್ರಸ್ಟ್ ಅಧ್ಯಕ್ಷ ಮಂಚೇಗೌಡ, ಶಿವಚೆಂದು ಲಕ್ಷ್ಮಣ್, ಮೋಹನದಾಸ, ಅಶೋಕ್ ಕುಮಾರ್, ಚಂದ್ರ ಕುಮಾರ್, ಎಚ್.ಕೆ.ತೇಜ್‌ಕುಮಾರ್(ಶ್ಯಾಮ), ನಾಗೇಶ್, ಪ್ರಶಾಂತ್ ಮುರಳಿ, ನಾಗರಾಜು, ಎ.ಎಸ್. ದೇವರಾಜು, ಕೃಷ್ಣ ಇತರರು ಇದ್ದರು.