ಗುಯ್ಯ ಪಳ್ಳಕೇರೆ ರಸ್ತೆ ದುರಸ್ತಿಗೆ ಒತ್ತಾಯ

10ಎಸ್ ಡಿ ಪಿ 01
Published on

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಯ್ಯ ಪಳ್ಳಕೇರೆ ರಸ್ತೆ ಕಳೆದ ಹಲವಾರು ವರ್ಷಗಳಿಂದಲೂ ಗುಂಡಿಮಯವಾಗಿದ್ದು, ದುರಸ್ತಿ ಕಾಣದೆ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಈ ಹದಗೆಟ್ಟ ರಸ್ತೆಯಲ್ಲೇ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ದಿನನಿತ್ಯ ಸಂಚರಿಸುತ್ತಿದ್ದು, ಹಳ್ಳಕೊಳ್ಳಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ.
ರಸ್ತೆ ದುರಸ್ತಿಗೆ ಗ್ರಾಮಸ್ಥರು ಹಲವು ವರ್ಷಗಳಿಂದಲೂ ಒತ್ತಾಯಿಸಿದ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಕಾಟಾಚಾರಕ್ಕೆ ಕಳಪೆ ಕಾಮಗಾರಿ ಮಾಡಲಾಗಿದ್ದು, ಒಂದೇ ವಾರದಲ್ಲಿ ಡಾಂಬರು ಎದ್ದು ಹೋಗಿದೆ.
ಸಿದ್ದಾಪುರ ಗುಯ್ಯ ಪಳ್ಳಕೆರೆ ಮಾರ್ಗವಾಗಿ ಕಣ್ಣಂಗಾಲ ರಸ್ತೆಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಯಾವುದೇ ಬಸ್ ಸಂಚಾರ ವ್ಯವಸ್ಥೆ ಇಲ್ಲದೆ ಖಾಸಗಿ ಹಾಗೂ ಬಾಡಿಗೆ ವಾಹನಗಳಲ್ಲಿ ದಿನನಿತ್ಯ ಸಂಚರಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತರಳಬೇಕಾದರೆ ಬಾಡಿಗೆ ವಾಹನಗಳು ಗ್ರಾಮಕ್ಕೆ ಬರಲು ಹಿಂದೇಟಾಗುತ್ತಿವೆ. ಕಾಡು ಪ್ರಾಣಿಗಳ ಹಾವಳಿಯಿಂದ ಅಭಿವೃದ್ಧಿ ಕಾಣದ ರಸ್ತೆಯಲ್ಲಿ ಬಾಡಿಗೆ ವಾಹನಗಳು ಗ್ರಾಮಕ್ಕೆ ಬರಬೇಕಾದರೆ ದುಬಾರಿ ಹಣ ನೀಡಬೇಕಾಗಿದೆ.
ರಸ್ತೆಯುದ್ಧಕ್ಕೂ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ನಿಂತು ಕೆರೆಯಂತಾಗುತ್ತಿದೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳು ರಸ್ತೆಯನ್ನು ದಾಟಲು ಹರಸಾಹಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net