

ವಿಜಯಪುರ: ಟೀಂ ಫ್ಯಾಷನ್ ಗೋವಾ ಎಂಬ ಸಂಸ್ಥೆ ನಡೆಸಿರುವ ಸೀ ವೈಬ್ಸ್ ಎಂಬ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜಯಪುರದ ವಿವೇಕ ನಗರದ ನಿವಾಸಿ 27ವರ್ಷದ ಪೂಜಾ ಜಹಾಗಿರದಾರ ವಿನ್ನರ್ ಆಗಿದ್ದಾರೆ. ಡಿಸೆಂಬರ್ 20ರಂದು ಗೋವಾದ ಹೊಟೇಲ್ ಪ್ಯಾರಾಡೈಸ್ ನಲ್ಲಿ ನಡೆದ ಈ ಕಾಂಪಿಟೇಷನ್ ನಲ್ಲಿ ದೇಶದ ವಿವಿಧೆಡೆಯಿಂದ 40ಕ್ಕೂ ಅಧಿಕ ಬ್ಯೂಟಿಷಿಯನ್ ಗಳು ಭಾಗವಹಿಸಿದ್ರು. ಇದಕ್ಕೂ ಮೊದಲು ಭಾರತದಾದ್ಯಂತ ವಿವಿಧೆಡೆ ಆಡಿಷನ್ ಮಾಡಲಾಗಿದ್ದು, ಟಾಪ್ 40 ಬ್ಯೂಟಿಷಿಯನ್ ಗಳ ಮದ್ಯೆ ಗ್ರ್ಯಾಂಡ್ ಫಿನಾಲೆಯನ್ನು ಗೋವಾದಲ್ಲಿ ಆಯೋಜಿಸಲಾಗಿತ್ತು. ಮಾಹಿತಿ ಮತ್ತು ಪರಿಚಯ, ಸಾಂಪ್ರದಾಯಿಕ ಸುತ್ತು, ಪಶ್ಚಿಮ ಸುತ್ತು, ಪ್ರಶ್ನೋತ್ತರ ಸುತ್ತು ಎಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿತ್ತು. ಕೊನೆಗೆ ವೇದಿಕೆ ಮೇಲೆ ರಾಂಪ್ ವಾಕ್ ನಡೆಸಿ ಟಾಪ್ ವಿನ್ನರ್ ಬ್ಯೂಟಿಷಿಯನ್ ಅನ್ನು ಆಯ್ಕೆ ಮಾಡಲಾಯಿತು. ಈ ವೇಳೆ ವಿಜಯಪುರದ ಪೂಜಾ ಜಹಾಗಿರದಾರ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಇವರಿಗೆ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಆಯೋಜಿಸಿದ್ದ ಸೀ ವೈಬ್ಸ್ ನಿಂದಲೇ ಬೆಸ್ಟ್ ಸ್ಕಿನ್ ಅವಾರ್ಡ್ ಕೂಡ ನೀಡಿದ್ದಾರೆ. ಸೌಂದರ್ಯ ಸ್ಪರ್ಧೆ ವಿನ್ನರ್ ಆಗಿರುವ ಪೂಜಾ ಜಹಾಗಿರದಾರ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ವಿವಿಧ ವಯಸ್ಸಿನ ಕೆಟಗೆರಿಗಳಲ್ಲಿ ನಡೆದ ಸೀ ವೈಬ್ಸ್ ಸ್ಪರ್ಧೆಯಲ್ಲೇ ಪೂಜಾ ಅವರ ತಾಯಿ ಕವಿತಾ ಜಹಾಗಿರದಾರ ಅವರೂ ಕೂಡ ಭಾಗವಹಿಸಿದ್ರು. 27 ವರ್ಷದ ಮಗಳು ಪೂಜಾ ಭಾಗವಹಿಸಿದ್ದ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲೇ 46ವರ್ಷದ ತಾಯಿ ಕವಿತಾ ಜಹಾಗಿರದಾರ ಸಹ ಸ್ಪರ್ಧಿಸಿ ಅತ್ಯುತ್ತಮ ಫೋಟೊಜನಿಕ್ ಫೇಸ್ ಎಂಬ ಅವಾರ್ಡ್ ಪಡೆದಿದ್ದಾರೆ. ಹೀಗಾಗಿ ಒಂದೇ ವೇದಿಕೆಯಲ್ಲಿ ತಾಯಿ-ಮಗಳು ಭಾಗವಹಿಸಿ ಡಬಲ್ ಧಮಾಕ್ ಪಡೆಯುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದು, ಕವಿತಾ ಜಹಾಗಿರದಾರ ಸಂಭ್ರಮಿಸಿದ್ದಾರೆ.
ಬ್ಯಾಚುಲರ್ ಆಫ್ ಬಿಜಿನೆಸ್ ಅಡ್ಮಿನಿಷ್ಟ್ರೇಷನ್ ಕೋರ್ಸ್ ಮುಗಿಸಿರುವ ಪೂಜಾಳಿಗೆ ಫ್ಯಾಷನ್ ಲೋಕದಲ್ಲಿ ಹೆಚ್ಚಿನ ಆಸಕ್ತಿಯಿದ್ದು, ಮಾಡೆಲ್ ಆಗಿದ್ದಾರೆ. ಇವರ ತಾಯಿ ಕವಿತಾ ಕೂಡ ಬಿಕಾಂ ಪದವಿಧರೆಯಾಗಿದ್ದು, ಹಾಡು, ನೃತ್ಯ, ಫ್ಯಾಷನ್ ಡಿಸೈನ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಒಂದೇ ಮನೆಯಲ್ಲಿ ಮಗಳು ಬ್ಯೂಟಿಷಿಯನ್ ಆಗಿ ವಿನ್ನರ್ ಆಗಿದ್ರೆ ಪತ್ನಿ ಫೋಟೊಜೆನಿಕ್ ಫೇಸ್ ಅವಾರ್ಡ್ ಪಡೆದಿದ್ದರಿಂದ ಕುಟುಂಬದ ಹಿರಿಯ ಕೇಶವಾಚಾರ್ಯ ಜಹಾಗಿರದಾರ ಖುಶಿ ಹಂಚಿಕೊಂಡಿದ್ದಾರೆ.
ಇನ್ನೂ ಟೀಂ ಫ್ಯಾಷನ್ ಗೋವಾ ಆಯೋಜಿಸಿದ್ದ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ರೂವಾರಿಗಳಾದ ಯೋಗೀಶ ಹೊಸಮಠ, ಸುದೇಶ ಸಲಗಾಂವಕರ, ಶೃತಿ ದಾವಂಡೆ, ರಮೇಶ ಪಾಟಿಲ್, ಅರ್ಚನಾ ಡಿಚೋಲ್ಕರ್ ತಂಡಕ್ಕೆ ಕುಟುಂಬ ಧನ್ಯವಾದ ಅರ್ಪಿಸಿದೆ.