

ಚಾಮರಾಜನಗರ:ನಾಡಿನ ರಂಗಭೂಮಿಗೆ ಜನಪ್ರಿಯ ನಾಟಕಗಳನ್ನು ನೀಡಿದ ಹೆಗ್ಗಳಿಕೆ ಗುಬ್ಬಿ ವೀರಣ್ಣ ಅವರದ್ದಾಗಿದೆ ಎಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 30ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗುಬ್ಬಿ ವೀರಣ್ಣ ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳೊಲ್ಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ಅವರು, ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿದರು. ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಹಾಗೂ ರಂಗಭೂಮಿಯನ್ನು ಸಲುಹಿದ ಕರ್ಮಜೀವಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ, ನಿಜಧ್ವನಿ ಗೋವಿಂದರಾಜ್, ಮಹೇಶಗೌಡ, ಚಾ.ವೆಂ.ರಾಜ್ ಗೋಪಾಲ್, ಎಂ.ಎಸ್.ಲೋಕೇಶ್, ಬಸವರಾಜುನಾಯಕ, ಮಹದೇವನಾಯಕ, ಡಾ.ಪರಮೇಶ್ವರಪ್ಪ, ಶಿವಲಿಂಗಮೂರ್ತಿ, ಪಣ್ಯದಹುಂಡಿ ರಾಜು, ಸರಸ್ವತಮ್ಮ, ಚಾ.ಸಿ.ಸಿದ್ದರಾಜು, ರವಿಚಂದ್ರಪ್ರಸಾದ್ ಕಹಳೆ, ಲಿಂಗರಾಜು, ನಂಜುಂಡಶೆಟ್ಟಿ, ರಾಚಪ್ಪ ಇತರರು ಹಾಜರಿದ್ದರು.