

ಗುಬ್ಬಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬೆಣಚಿಗೆರೆ ಬಿ.ಎಸ್.ಪಂಚಾಕ್ಷರಿ ಹಾಗೂ ಉಪಾಧ್ಯಕ್ಷರಾಗಿ ಹಾಗಲವಾಡಿ ಜಯಪ್ರಕಾಶ್ ಅವಿರೋಧ ಆಯ್ಕೆಯಾದರು.
ಟಿಎಪಿಸಿಎಂಎಸ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಂಚಾಕ್ಷರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಯಪ್ರಕಾಶ್ ಹೊರತು ಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಹಕಾರ ಇಲಾಖೆಯ ಕೆ.ಎಚ್.ಮಹಂತೇಶಯ್ಯ ಘೋಷಿಸಿದರು.
ನೂತನ ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ, ಕೃಷಿಕ ವರ್ಗದ ಹಿತ ಕಾಯುವ ಜತೆಗೆ ಈ ಸಹಕಾರ ಸಂಘವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲ ನಿರ್ದೇಶಕರ ಸಹಕಾರ ಪಡೆದು ಕೆಲಸ ಮಾಡುತ್ತೇನೆ. ರೈತರ ಕ್ಷೇತ್ರದಿಂದ ಆಯ್ಕೆಯಾದ ನಾನು ರೈತ ಪರ ಕೆಲಸ ಮಾಡಲು ಎಲ್ಲರ ಸಹಕಾರವನ್ನು ಪಕ್ಷಾತಿತವಾಗಿ ಕೇಳುತ್ತೇನೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ ಮಾತನಾಡಿ, ಪಕ್ಷಾತಿತ ನಿಲುವು ಸಹಕಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಂಡು ಬಂದಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಸ್ವಲ್ಪ ರಾಜಕಾರಣ ಕಂಡು ಬಂತು. ಆದರೂ ಮತದಾರರು ಆಯ್ಕೆ ಮಾಡಿದ ನಿರ್ದೇಶಕರು ರೈತರ ಪರ ನಿಲ್ಲುತ್ತಾರೆ. ಸರ್ಕಾರ ಹಾಗೂ ಸಹಕಾರ ಇಲಾಖೆಯ ಸಹಾಯ ಪಡೆದು ಕೆ.ಎನ್.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ಧಿಪಡಿಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ನೂತನ ಉಪಾಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಕೆಲ ನಿರ್ದೇಶಕರ ಆಯ್ಕೆ ಅವಿರೋಧ ಹಾಗೂ ಕೆಲ ಸದಸ್ಯರ ಆಯ್ಕೆ ಮತದಾನ ಮೂಲಕ ನಡೆದಿದೆ. ಆದರೆ ನಂತರದಲ್ಲಿ ಯಾವ ಗೊಂದಲವಿಲ್ಲದೆ ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಈ ಸ್ಥಾನಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದರು.
ಸಹಕಾರ ಯೂನಿಯನ್ ನಿರ್ದೇಶಕ ಜಿ. ಡಿ.ಸುರೇಶಗೌಡ, ಸಂಘದ ಕಾರ್ಯದರ್ಶಿ ಎಸ್.ವಿ.ಶ್ರೀನಾಥ್, ಮುಖಂಡರಾದ ಎಚ್.ಟಿ.ಭೈರಪ್ಪ, ಯತೀಶ್, ಸಿದ್ದರಾಮಯ್ಯ, ಉಮೇಶ್, ಜಿ.ಆರ್.ಪ್ರಕಾಶ್, ಡಿ.ರಘು, ಅರ್ಜುನ್, ಅನಿಲ್, ಅರೇಹಳ್ಳಿ ರಾಜು ಮತ್ತಿತರರು ಇದ್ದರು.