

ಶೃಂಗೇರಿ: ಮೆಣಸೆ ಗ್ರಾಪಂ ಮಸಿಗೆ ಗ್ರಾಮದ ಗುತ್ಯಮ್ಮ ಮಾತಂಗಿ ದೇವಸ್ಥಾನದಲ್ಲಿ ಮಂಗಳವಾರ ಹರಕೆ ಕೈಂಕರ್ಯ ನೆರವೇರಿಸಲಾಯಿತು.
ಹರಕೆ ಉತ್ಸವ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದು, ಮೆಣಸೆ, ಮಸಿಗೆ, ಕುಂತೂರು ಹಾಗೂ ಕಿಕ್ರೆ ಗ್ರಾಮದ ಭಕ್ತಾದಿಗಳು ಹರಕೆಯಲ್ಲಿ ಭಾಗವಹಿಸಿ, ದೇವಿಗೆ ಪೂಜೆ ಸಲ್ಲಿಸಿದರು. ಹಾಲಿವಾಣ ಮರದಲ್ಲಿ ನಿರ್ಮಿಸಿದ ಉತ್ಸವ ಬೊಂಬೆಗೆ ವಿಶೇಷ ಅಲಂಕಾರ ಹಾಗೂ ಮಧುಮಗಳಂತೆ ಸಿಂಗರಿಸಿ, ಮಾಂಗಲ್ಯ ಧಾರಣೆ, ಮಡಿಲು ತುಂಬುವ ಶಾಸ್ತ್ರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮೆರವಣಿಗೆ ಮೂಲಕ ಉತ್ಸವಮೂರ್ತಿಯನ್ನು ಗ್ರಾಮದ ಗಡಿಯಲ್ಲಿ ಬಿಡಲಾಯಿತು.
ಮೆಣಸೆ ಅನಂತ ಭಟ್ಟರ ನೇತೃತ್ವದಲ್ಲಿ ಪಾರಾಯಣ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ, ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಅರ್ಚಕ ಶಿವಕುಮಾರ್ ನೇತೃತ್ವದಲ್ಲಿ ಪೂಜೆಯ ನಂತರ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.
ಈ ಕುರಿತು ಅನಿಲ್ ಹೊಸಕೊಪ್ಪ ಮಾತನಾಡಿ, ಗ್ರಾಮ ದೇವತೆಗಳಿಗೆ ಹರಕೆ ಸಲ್ಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದ್ದು, ಅದರಂತೆ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಗುತ್ಯಮ್ಮ ಮಾತಂಗಿಗೆ ವಿಶೇಷ ಪೂಜೆ, ಹರಕೆ ಸಲ್ಲಿಸಿದರು ಎಂದು ಹೇಳಿದರು.
ಗ್ರಾಮದ ಶಿಂಗಪ್ಪ ಗೌಡ, ಸುಬ್ಬಣ್ಣ, ಹಿರಿಯಣ್ಣ, ರಾಘವೇಂದ್ರ, ಎಂ.ಸಿ.ಅಶೋಕ್, ಕೃಷ್ಣಪ್ಪ ಗೌಡ, ನಾಗಪ್ಪ ಗೌಡ, ರಾಜು ಶೆಟ್ಟಿ, ಶೇಖರ ಗೌಡ, ತ್ರಿಮೂರ್ತಿ, ಸಂಪತ್ ಇತರರಿದ್ದರು.