

ಹರಿಹರ: ಗುತ್ತೂರು ಗ್ರಾಮದಲ್ಲಿ ಸರ್ಕಾರಿ ಪಪೂ ಕಾಲೇಜು ಅವಶ್ಯಕತೆ ಇದ್ದು, ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ ಕೋರಿದರು.
ಸಮೀಪದ ಗುತ್ತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಲಾಭಿವೃದ್ಧಿ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಹಿಂದಿನ ಸಮಿತಿ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಟ್ಟಿಗೆ ಭಟ್ಟಿ ಉತ್ಪಾದನೆಗೆ ಪ್ರಸಿದ್ಧಿ ಪಡೆದ ಪ್ರದೇಶವಾಗಿದ್ದು ಇಲ್ಲಿನ ನೂರಾರು ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಈ ಸರ್ಕಾರಿ ಪ್ರೌಢಶಾಲೆ ಆಧಾರವಾಗಿದೆ. ಈ ಶಾಲೆಯ ವಿಸ್ತಾರವಾದ ಜಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಆರಂಭಿಸಿದರೆ ಗುತ್ತೂರಿನ ಜೊತೆಗೆ ಹರ್ಲಾಪುರ, ಗಂಗನರಸಿ, ಸಾರಥಿ, ಚಿಕ್ಕಬಿದರಿ, ಪಾಮೇನಹಳ್ಳಿಯ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.
ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಟಿ.ಸಿದ್ದಪ್ಪ ಮಾತನಾಡಿ, ಸರ್ಕಾರಿ ಶಾಲೆಯಾದರೂ ಈ ಶಾಲೆಯು ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಂಡಿದೆ. ನೂತನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಜೆ.ನಾಗರಾಜ್ ಇವರು 32 ಸಾವಿರ ರೂ. ವೆಚ್ಚದಲ್ಲಿ ಶಾಲೆಗೆ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿರುವುದು ಸಂತಸದ ವಿಷಯ ಎಂದರು.
ಹೊಸ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಜೆ.ನಾಗರಾಜ್ ಹಾಗೂ ಸದಸ್ಯರು ಪದಗ್ರಹಣ ಮಾಡಿದರು. ಹಿಂದಿನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕರಿಬಸಪ್ಪ ಜಿ.ಎನ್. ಹಾಗೂ ಸದಸ್ಯರನ್ನು ಸತ್ಕರಿಸಿ ಬೀಳ್ಕೊಡಲಾಯಿತು.
ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಮಾತನಾಡಿದರು.ಹಿರಿಯರಾದ ಬಸವಲಿಂಗಪ್ಪ ಗೌಡ್ರು, ಕರಿಬಸಣ್ಣ, ಶಿಕ್ಷಕರಾದ ಶ್ರೀಧರ್ ಮಯ್ಯ ಹಾಗೂ ಇತರರಿದ್ದರು. ಮಕ್ಕಳಿಗೆ ಸಿಹಿ ಊಟ ಬಡಿಸಲಾಯಿತು.