ಗುತ್ತಿಬಸವಣ್ಣ ಏತನೀರಾವರಿ ಯೋಜನೆ, ಹದಿನೈದು ದಿನದಲ್ಲಿ ಪಂಪ್ ಕಾರ್ಯಾರಂಭ, ಸಚಿವ ಗೋವಿಂದ ಕಾರಜೋಳ ಹೇಳಿದ್ದೇನು ಗೊತ್ತಾ?

1662035329282
Published on

ವಿಜಯಪುರ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಪಂಪ್‌ಗಳ ದುರಸ್ತಿಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

ಸಿಂದಗಿ ಮತ್ತು ಇಂಡಿ ತಾಲೂಕಿನ ರೈತರ ಹೊಲಗಳಿಗೆ ನೀರುಣಿಸುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಆರು ಪಂಪ್‌ಗಳು 2015 ರಿಂದ ದುರಸ್ತಿಯಾಗದೆ ನಿಷ್ಕ್ರೀಯಗೊಂಡಿದ್ದವು. ವಿಶೇಷವಾಗಿ ಕಾಲುವೆ ಕೊನೆ ಅಂಚಿನ ಭಾಗಕ್ಕೆ ಹಾಗೂ ಕಾಲುವೆಯ ಬಹುತೇಕ ಪ್ರದೇಶಕ್ಕೆ ನೀರು ಪೂರೈಕೆ ಆಗದೆ ವ್ಯತ್ಯಯ ಉಂಟಾಗಿತ್ತು. ಈಗ ಆರು ಪಂಪ್‌ಗಳ ಪೈಕಿ ನಾಲ್ಕು ಪಂಪ್‌ಗಳು ದುರಸ್ತಿಯಾಗಿ ಕಾರ್ಯಾರಂಭ ಮಾಡಿವೆ. ಇನ್ನೂ ಒಂದು ಪಂಪ್ ಇದೇ ತಿಂಗಳ 6ನೇ ತಾರೀಖಿನಂದು ದುರಸ್ತಿಯಾಗಿ ಯೋಜನಾ ಪ್ರದೇಶ ತಲುಪಲಿದ್ದು, ಸೆ.7ರಂದು ಪಂಪ್ ಕೂಡಾ ಚಾಲನೆಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಪಂಪ್‌ಗಳನ್ನು ತ್ವರಿತಗತಿಯಲ್ಲಿ ಕೇವಲ ಆರು ತಿಂಗಳಲ್ಲಿ ದುರಸ್ತಿ ಮಾಡಿಸಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕಾರ್ಯಾರಂಭ ಮಾಡಿಸಲಾಗಿದೆ. ಈ ಪಂಪ್‌ಗಳನ್ನು ದುರಸ್ತಿ ಮಾಡಿದ ಕಂಪನಿಗೆ ಮುಂದಿನ ಐದು ವರ್ಷಗಳ ನಿರ್ವಹಣೆಯ ಹೊಣೆಗಾರಿಕೆ ನೀಡಲಾಗಿದೆ.

ಈ ಕಂಪನಿಯು ಯೋಜನಾ ಪ್ರದೇಶದಲ್ಲಿ ತನ್ನ ಒಬ್ಬರು ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರ್‌ನ್ನು ಒದಗಿಸಿ ಪಂಪ್‌ಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಜವಾಬ್ದಾರಿ ವಹಿಸಿಕೊಂಡಿದೆ. ಈಗ ಮೂರು ಪಂಪ್‌ಗಳು ಕಾರ್ಯ ಆರಂಭ ಮಾಡಿದ್ದು, ಮುಂದಿನ 15 ದಿನಗಳಲ್ಲಿ ಎಲ್ಲ ಆರು ಪಂಪ್‌ಗಳು ಕಾರ್ಯಾರಂಭ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾಗಿ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net