

ಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ, ಶಿಕ್ಷಣ, ಆಹಾರಕ್ಕೆ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿವೆ. ಅದರಲ್ಲಿಯೂ ಸರ್ಕಾರದ ವಿದ್ಯಾರ್ಥಿ ವಸತಿನಿಲಯಗಳಲ್ಲಿ ಗುತ್ತಿಗೆದಾರರ ಲಾಬಿಯಿಂದ ಮಕ್ಕಳಿಗೆ ವ್ಯವಸ್ಥಿತವಾಗಿ ಆಹಾರ ಪೂರೈಕೆಯಾಗುತ್ತಿಲ್ಲ. ಇದನ್ನು ಹೇಗೆ ಸರಿಮಾಡಬೇಕು ಎಂಬುದು ನಮಗೆ ತಿಳಿದಿದೆ. ಬರುವ ದಿನಗಳಲ್ಲಿ ಮದ್ದು ಅರಿಯುವ ಕೆಲಸ ಮಾಡುತ್ತೇವೆ ಎಂದು ಶಾಸಕ ಹರತಾಳು ಹಾಲಪ್ಪ ಎಚ್ಚರಿಕೆ ನೀಡಿದರು.
ನಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಮಕ್ಕಳ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಆಗುತ್ತಿದೆ. ಗುತ್ತಿಗೆದಾರರು ಪ್ರಬಲವಾಗುತ್ತಿದ್ದಾರೆ. ಅಧಿಕಾರಿಗಳು ಸಹ ನಿಸ್ಸಹಾಯಕರಾಗಿದ್ದಾರೆ. ಮಕ್ಕಳಿಗೆ ಅರೆಹೊಟ್ಟೆ ಅನ್ನ ಕೊಟ್ಟು, ಪಾಪದ ಹಣ ತಿಂದರೆ ಒಳ್ಳೆಯದಾಗುವುದಿಲ್ಲ. ಆಹಾರ ಹಂಚಿಕೆಯಲ್ಲಿ ಪಾರದರ್ಶಕ ವ್ಯವಸ್ಥೆ ತರಬೇಕಾಗಿದೆ. ಇಲಾಖೆಗೆ ಕೋಟ ಶ್ರೀನಿವಾಸ್ ಪೂಜಾರಿಯಂತಹ ದಕ್ಷ ಮಂತ್ರಿಗಳಿದ್ದಾರೆ. ಈ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ತುರ್ತಾಗಿ ಸಚಿವರೊಂದಿಗೆ ಮಾತುಕತೆ ಮಾಡುತ್ತೇನೆ ಎಂದರು.
ಸಾಗರ ತಾಲೂಕಿನಲ್ಲಿ ಬೇರೆ ಬೇರೆ ವಸತಿ ನಿಲಯಗಳಲ್ಲಿ 2,803 ವಿದ್ಯಾರ್ಥಿಗಳಿದ್ದಾರೆ. ಪ್ರತಿ ವಿದ್ಯಾರ್ಥಿಗೆ 1600 ರೂ.ನಂತೆ ವರ್ಷಕ್ಕೆ 45 ಲಕ್ಷ ರೂ. ಕೇವಲ ಆಹಾರಕ್ಕೆ ಖರ್ಚು ಮಾಡಲಾಗುತ್ತಿದೆ. ಇದರ ಜತೆಗೆ ಬೇರೆ ಬೇರೆ ಉದ್ದೇಶಕ್ಕೆ ಹಣ ನೀಡಲಾಗುತ್ತಿದೆ. ಇದರ ಸದ್ಬಳಕೆ ಆಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಗುಣಮಟ್ಟದ ಫಲಿತಾಂಶ ತರುವತ್ತ ಗಮನ ಹರಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾವು ಉತ್ತಮ ಸಾಧನೆ ಮಾಡಬೇಕು. ನಿಮ್ಮ ಮೇಲೆ ಗುರುತರ ಜವಾಬ್ದಾರಿಯಿದೆ. ಪೋಷಕರ ನಿರೀಕ್ಷೆ ನಿಮ್ಮ ಮೇಲೆ ಇರುತ್ತದೆ. ಅದನ್ನು ನಿಜಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ಸಮಸ್ಯೆ ಹಿನ್ನೆಲೆಯಲ್ಲಿ ಸುಸಜ್ಜಿತವಾದ ವಿದ್ಯಾರ್ಥಿ ನಿಲಯವನ್ನು ಶಾಸಕರು ಆಸಕ್ತಿ ವಹಿಸಿ ನಿರ್ಮಿಸಲು ಸಹಕಾರ ನೀಡಿದ್ದಾರೆ. ನಗರಸಭೆಯಿಂದ ಸ್ವಚ್ಛತೆಗೆ ಒತ್ತು ನೀಡಲಾಗುವುದು. ರಸ್ತೆ ಮತ್ತು ಕಾಂಪೌಂಡ್ ಅನ್ನು ನಗರಸಭೆಯಿಂದ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.