

ಮೈಸೂರು: ವಿದ್ಯಾಕೇಂದ್ರವಾಗಿರುವ ಮೈಸೂರು ಅನೇಕ ಜನರಿಗೆ ಆಶ್ರಯ ತಾಣವಾಗಿದ್ದು, ಅಕ್ಷರದ ಮೂಲಕ ಬದುಕು ರೂಪಿಸಿಕೊಳ್ಳಲು ನೆರವಾಗಿದೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಗುತ್ತಿಗೆದಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಗುತ್ತಿಗೆದಾರರನ್ನು ಸನ್ಮಾನಿಸಿ ಮಾತನಾಡಿದರು.
ರಾಜಕಾಲದಿಂದಲೂ ನಗರದಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಇಲ್ಲಿ ಕಲಿತ ಅನೇಕರು ಉನ್ನತ ಸಾಧನೆ ಮಾಡಿದ್ದಾರೆ. ಯಾವುದೇ ತರಬೇತಿಯಿಲ್ಲದೆಯೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದವರೂ ಇದ್ದಾರೆ ಎಂದು ಬಣ್ಣಿಸಿದರು.
ಗುತ್ತಿಗೆದಾರರ ಶ್ರಮ ಹಾಗೂ ಸಹಕಾರದಿಂದ ಬೆಳೆಯುತ್ತಿರುವ ಗುತ್ತಿಗೆದಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯೂ ವಿದ್ಯಾರ್ಥಿಗಳಿಗೂ ಸಹಾಯ ಯೋಜನೆ ರೂಪಿಸಿ, ಹಲವು ಪ್ರತಿಭೆಗಳ ಬೆಳವಣಿಗೆಗೆ ಸಹಕಾರ ನೀಡುತ್ತಿದೆ. ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿರುವುದು ಶ್ಲಾಘನೀಯ. ಸರ್ಕಾರಿ ಸೇವೆ ಸೇರಲು ಪ್ರಯತ್ನಿಸುವ ಅಭ್ಯರ್ಥಿಗಳಿಗೆ ಧನ ಸಹಾಯ ಕಾರ್ಯಕ್ರಮ ರೂಪಿಸಿದರೆ, ಜಿಲ್ಲೆಯಲ್ಲಿ ಇನ್ನಷ್ಟು ಸಾಧಕರು ಹೊರಹೊಮ್ಮಲಿದ್ದಾರೆ ಎಂದರು.
ಸೊಸೈಟಿ ಅಧ್ಯಕ್ಷ ಮಹಾಲಿಂಗಂ ಮಾತನಾಡಿ, ರಾಜ್ಯದಲ್ಲಿಯೇ ಏಕೈಕ ಗುತ್ತಿಗೆದಾರರ ಸೊಸೈಟಿಯಾಗಿ ನಮ್ಮ ಸೊಸೈಟಿಗೆ ರಾಜ್ಯ ಸರ್ಕಾರದಿಂದ 6 ಬಾರಿ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ದೊರೆತಿದೆ. 20ವರ್ಷಗಳಿಂದ ಲಾಭದ ದಾರಿಯಲ್ಲಿ ಸಾಗಿಬಂದಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ವಿವರಿಸಿದರು.
ಆದಿಚುಂಚನಗಿರಿ ಮೈಸೂರು ಶಾಖಾಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಕೆ.ಆರ್.ನಗರ ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಮುಖ್ಯ ಭಾಷಣ ಮಾಡಿದರು. ಸೊಸೈಟಿ ಉಪಾಧ್ಯಕ್ಷ ಗೋವಿಂದೇಗೌಡ, ನಿರ್ದೇಶಕರಾದ ಎಸ್.ಗೋಪಾಲರಾಜು, ವಿ.ಕುಮಾರ್, ಬಿ.ಪುಟ್ಟಸ್ವಾಮಿ, ಚಂದ್ರಶೇಖರಯ್ಯ, ಕೆ.ವಿ.ಚಿನ್ನಯ್ಯ, ಸಿ.ಡಿ.ಕೃಷ್ಣ, ಎಚ್.ಎಂ.ಪರಶಿವಮೂರ್ತಿ, ರಾಚೇಗೌಡ, ಕೆ.ರವಿ, ಕೆ.ನಾಗರಾಜು, ಎಸ್.ಜೆ.ಜಗದೀಶ್, ದೇವೇಂದ್ರ, ಕೆ.ದಶರಥ, ಟಿ.ಅನುಸೂಯ, ಜಯಲಕ್ಷ್ಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಚ್.ಕುಮಾರ್ ಇದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 16 ಹಾಗೂ ಪಿಯು ವಿಭಾಗದ ಸಾಧಣೆ ಮಾಡಿದ 10 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 26 ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪುರಸ್ಕಾರಿಸಲಾಯಿತು. ಇದೇ ವೇಳೆ ಪುರಸ್ಕಾರಕ್ಕೆ ಸಹಕರಿಸಿದ ದಾನಿಗಳನ್ನೂ ಸನ್ಮಾನಿಸಲಾಯಿತು.