

ಕೋಲಾರರಸ್ತೆ, ಕಟ್ಟಡ ಸೇರಿ ಇತರೆ ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ ಕೂಡಲೇ ಬಾಕಿ ಹಣವನ್ನು ಪಾವತಿಸಬೇಕು. ನಾನಾ ಕಾರಣ ಮುಂದಿಟ್ಟು ನ್ಯಾಯಯುತವಾಗಿ ಕಾಮಗಾರಿ ಮಾಡಿರುವವರನ್ನು ಅಲೆದಾಡಿಸುವುದು ಸರಿಯಲ್ಲ ಎಂದು ಎಂಎಲ್ಸಿ ಇಂಚರ ಗೋವಿಂದರಾಜು ವಿಧಾನ ಪರಿಷತ್‌ನ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನ ಸೆಳೆದರು.
ಕೋಲಾರ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಲೆಕ್ಕ ಶೀರ್ಷಿಕೆಯಡಿ ರಾಜ್ಯ ಹೆದ್ದಾರಿ, ಸೇತುವೆ, ನ್ಯಾಯಾಂಗ ಇಲಾಖೆ ಕಟ್ಟಡಗಳು, ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಿರುತ್ತಾರೆ. ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಸರ್ಕಾರದಿಂದ ಬಾಕಿ ಹಣ ೧೧೯ ಕೋಟಿ ರೂ. ಹಾಗೂ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಬಾಕಿ ಹಣ ಸೇರಿ ಒಟ್ಟು ೨೦೦ ಕೋಟಿ ರೂ. ಬಿಡುಗಡೆಗೊಳಿಸಬೇಕಾಗಿದೆ. ಬಾಕಿ ಹಣವನ್ನು ಇದುವರೆಗೂ ನೀಡದೇ ಇರುವುದರಿಂದ ಗುತ್ತಿಗೆದಾರರು ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೋಟ್ಯಂತರ ರೂ. ಸಾಲ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಸರ್ಕಾರ ಸಮಯಕ್ಕೆ ಸರಿಯಾಗಿ ಕಾಮಗಾರಿ ಹಣ ಬಿಡುಗಡೆ ಮಾಡದಿದ್ದರೆ ಅವರು ಆತ್ಮಹತ್ಯೆ ಹಾದಿ ಹಿಡಿದರೂ ಆಶ್ಚರ್ಯವಿಲ್ಲ. ಹೀಗಾಗಿ ಸರಿಯಾಗಿ ಕಾಮಗಾರಿ ಮಾಡಿರುವವರ ಹಣ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಿಂದ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮೇ-೨೦೨೩ ರ ಅಂತ್ಯಕ್ಕೆ ವಿವಿಧ ಲೆಕ್ಕಶೀರ್ಷಿಕೆಗಳಡಿ ಒಟ್ಟಾರೆ ರೂ. ೮೫೦೬ ಕೋಟಿ ರೂ. ಬಿಲ್ಲುಗಳು ಪಾವತಿಗೆ ಬಾಕಿಯಿರುತ್ತವೆ. ೨೦೨೩-೨೪ ನೇ ಸಾಲಿನ ಆಯವ್ಯಯದಲ್ಲಿ ೯೧೧೧.೨೦ ಕೋಟಿ ಅನುದಾನ ಒದಗಿಸಲಾಗಿದೆ. ಈ ಅನುದಾನವನ್ನು ಇಲಾಖೆ ಕಾರ್ಯದರ್ಶಿಗೆ ಪ್ರತಿ ತಿಂಗಳಿನ ಬಾಕಿ ಬಿಲ್ಲುಗಳನ್ನು ಆಧರಿಸಿ ವಲಯಗಳಿಗೆ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಈ ಅನುದಾನವನ್ನು ವಲಯಗಳು ವಿಭಾಗಗಳಿಗೆ ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತದೆ. ಕೋಲಾರ ವಿಭಾಗದ ೧೨೬.೯೫ ಕೋಟಿ ಬಾಕಿ ಮೊತ್ತದ ಬಿಲ್ಲುಗಹಣ ಪ್ರತಿ ತಿಂಗಳು ಬಿಡುಗಡೆ ಮಾಡಲಾಗುವ ಅನುದಾನದಲ್ಲಿ ಸೇರಿಸಿ ಕೊಡಲು ಕ್ರಮವಹಿಸಲಾಗುದು ಎಂದು ಉತ್ತರಿಸಿದರು