ಗುತ್ತಿಗೆದಾರರ 25000 ಕೋಟಿ ರೂ. ಬಾಕಿ ಬಿಲ್ ಪಾವತಿಗೆ ಆಗ್ರಹ

Published on

ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ ಒತ್ತಾಯ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಪಾವತಿಸಬೇಕಿರುವ 25000 ಕೋಟಿ ರೂ. ಬಾಕಿ ಹಣವನ್ನು ಆಗಸ್ಟ್ 31ರೊಳಗೆ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದರು.
ಅವರು, ತಮ್ಮ ಶುಕ್ರವಾರ ಚಾಮರಾಜಪೇಟೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜಲಸಂಪನ್ಮೂಲ ಇಲಾಖೆಯಲ್ಲಿ 12000 ಕೋಟಿ ರೂ. ಅಧಿಕ ಹಣ ಬಾಕಿಯಿದೆ. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿಎಂತೆ 25000ಕೋಟಿ ರೂ. ಹಣ ಬರಬೇಕಾಗಿದೆ. ಆದಷ್ಟು ಬೇಗನ ಸರ್ಕಾರ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು.
ಕಳೆದ 7 ತಿಂಗಳಿನಿಂದ ಗುತ್ತಿಗೆದಾರರ ಬಾಕಿ ಬಿಡುಗಡೆಯಾಗಿರುವುದಿಲ್ಲ. ಚುನಾವಣೆ ಗಡಿಬಿಡಿ, ನೀತಿ ಸಂಹಿತೆ ಮೊದಲಾದ ಕಾರಣಗಳಿಗಾಗಿ ಚುನಾವಣೆಗೂ ಮುನ್ನ ಮೂರು ತಿಂಗಳು ಬಾಕಿ ಮೊತ್ತ ಬಿಡುಗಡೆಯಾಗಲಿಲ್ಲ. ಚುನಾವಣೆ ಮುಗಿದು ಇದೇ ಆಗಸ್ಟ್ 20ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸಿ ಆಗಸ್ಟ್ 20ಕ್ಕೆ ಮೂರು ತಿಂಗಳು ಕಳೆಯುತ್ತದೆ. ಈ ಅವಧಿಯಲ್ಲಿಯೂ ಗುತ್ತಿಗೆದಾರರ ಬಾಕಿ ಬಿಡುಗಡೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರೇ ಏನರ್ಥ ಎಂದು ಕೆಂಪಣ್ಣ ಪ್ರಶ್ನಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಪರವಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ತಲಾ ಎರಡು ಬಾರಿ ಭೇಟಿಯಾಗಿ ಕಳಕಳಿಯಿಂದ ಮನವಿ ಸಲ್ಲಿಸಿದ್ದೇವೆ. ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಎಲ್ಲರೂ ಮುಂದಿನ ವಾರ ಕೆಲವೇ ದಿನ ಎಂದು ಸಬೂಬು ಹೇಳುತ್ತಾ ಬಂದರು.
ಸರ್ಕಾರ 28-06-2023 ಮತ್ತು 30-07-2023 ರಂದು ಗುತ್ತಿಗೆದಾರರ ಬಾಕಿ ಮೊತ್ತವನ್ನು ಹಣ ಮೊತ್ತವನ್ನು ಹಣ ಬಿಡುಗಡೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿದೆಯಾದರೂ, ಆದೇಶ ಕಾರ್ಯರೂಪಕ್ಕೆ ಬಂದಿಲ್ಲ. ಇಲಾಖೆ ಸಚಿವರಿಂದ ಸೂಚನೆ ಬಂದಿರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮಧ್ಯೆ ಸಂಘ ಕೈಚೆಲ್ಲಿ ಕೂರದೆ ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ನಿರಂತರವಾಗಿ ನೆನಪು ಮಾಡುತ್ತಲೇ ಬಂದಿದ್ದೇವೆ. ನಮ್ಮ ಜಿಲ್ಲಾ ಸಂಘಗಳೂ ಆಯಾ ಜಿಲ್ಲೆಗಳ ಮಟ್ಟದಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರಗಳನ್ನು ಸಲ್ಲಿಸಿರುತ್ತಾರೆ. ಆದರೂ ಸರಕಾರ ಗುತ್ತಿಗೆದಾರರ ಸಂಕಟವನ್ನು ಆಲಿಸಲು ಸಿದ್ಧವಿಲ್ಲ ಎಂದು ಆರೋಪಿಸಿದರು. ಆಗಸ್ಟ್ 31ರೊಳಗೆ ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು ಇಲ್ಲದಿದ್ದರೇ ಯಾವ ರೀತಿ ಹೋರಾಟ ಕೈಗೊಳ್ಳಬೇಕು ಎಂದು ಎಲ್ಲ ಆಡಳಿತ ಮಂಡಳಿ ಸದಸ್ಯರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕೆಂಪಣ್ಣ ಹೇಳಿದರು.

ಗುತ್ತಿಗೆದಾರರ ‘ಬಾಕಿ ಭಾಗ್ಯ’ ಕೊಡಲಿ : ಸಿದ್ಧರಾಮಯ್ಯ ಸರ್ಕಾರ ಅನೇಕ ಭಾಗ್ಯಗಳನ್ನು ಕೊಟ್ಟಿದೆ. ಹಾಗಾಗಿ ಈ ಬಾರಿ ಗುತ್ತಿಗೆದಾರರ ಬಾಕಿ ಭಾಗ್ಯ ಕೊಡಲಿ. ಅನೇಕ ಕಾಮಗಾರಿಗಳನ್ನು ಪ್ರಮುಖವಾಗಿ ಕೈಗೊಳ್ಳುವ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೃತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಲಾಖೆಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಕೆಲಸಗಳಿಗೂ ಹಣ ಬಿಡುಗಡೆ ಮಾಡಬೇಕು ಎಂದು ಡಿ.ಕೆಂಪಣ್ಣ ಆಗ್ರಹಿಸಿದರು. ಕಾರ್ಯಾಧ್ಯಕ್ಷರಾದ ಆರ್.ಮಂಜುನಾಥ, ಜಗನ್ನಾಥ ಶೇಗಜಿ, ಉಪಾಧ್ಯಕ್ಷರಾದ ಬಿ.ಸಿ.ದಿನೇಶ, ಆರ್.ಅಂಬಿಕಾಪತಿ, ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಖಜಾಂಚಿ ಡಿ.ಎಂ.ನಾಗರಾಜ್ ಸೇರಿದಂತೆ ಮತ್ತಿತರು ಇದ್ದರು.

ಬಿಬಿಎಂಪಿಗೆ 675 ಕೋಟಿ ಬಿಡುಗಡೆ : ಬಿಬಿಎಂಪಿಗೆ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸುವುದಕ್ಕಾಗಿ ಸರ್ಕಾರ 675 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಆದರೆ ಬಿಬಿಎಂಪಿ ಆಯುಕ್ತರು ನಮಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. 2-3 ತಿಂಗಳು ವಿಳಂಬವಾದರೂ ಗುತ್ತಿಗೆದಾರರಿಗೆ ದೊರೆಬೇಕಾದ ಲಾಭ ಬ್ಯಾಂಕಿನ ಬಡ್ಡಿಗೆ ಹೋಗುತ್ತದೆ ಅದಕ್ಕಾಗಿ ಸರ್ಕಾರ ಬೇಗನೆ ಹಣ ಬಿಡುಗಡೆ ಮಾಡಬೇಕು ಎಂದು ಡಿ.ಕೆಂಪಣ್ಣ ಸರ್ಕಾರವನ್ನು ಒತ್ತಾಯಿಸಿದರು.

40% ಕಮೀಷನ್ ದಾಖಲೆ ನಿವೃತ್ತಿ ನ್ಯಾಯಮೂರ್ತಿಗಳಿಗೆ ಒಪ್ಪಿಸುವೆಹಿಂದೆ ಬಿಜೆಪಿ ಸರ್ಕಾರದ ಅವಧಿಯ 40% ಕಮೀಷನ್ ದಾಖಲೆ ಆರೋಪ ಕುರಿತು ಸರ್ಕಾರ ನ್ಯಾಯಾಂಗ ತನಿಖೆ ನಡೆಸಲಿದ್ದು, ನಿವೃತ್ತಿ ನ್ಯಾಯಮೂರ್ತಿಗಳಿಗೆ 40% ಕಮಿಷನ್ ದಾಖಲೆಗಳನ್ನು ಒಪ್ಪಿಸುವೆ. ಅನೇಕ ಬಾರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಈ ವಿಚಾರ ಗಮನಕ್ಕೆ ತಂದರೂ ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೇವಲ ಸುಳ್ಳು ಹೇಳುತ್ತಲೇ ಹೋದರು ಎಂದು ಬಸವರಾಜ ಬೊಮ್ಮಾಯಿ ವಿರುದ್ಧ ಡಿ.ಕೆಂಪಣ್ಣ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net