ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವ ಸೂಚನೆ

ಜನಸಂಪರ್ಕ ಸಭೆ
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
Published on

ರಾವಂದೂರು: ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಕಾಮಗಾರಿ ಕಳಪೆಯಾಗಿದ್ದು, ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಕೆ.ವೆಂಕಟೇಶ್ ಸೂಚನೆ ನೀಡಿದರು.

ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಅವರು ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದರೂ ನಿಗದಿತ ಸಮಯಕ್ಕೆ ಕೆಲಸ ಮುಗಿಸದೆ ಹಾಗೂ ಈ ಕೆಲಸ ಕಳಪೆ ಕಾಮಗಾರಿಯಿಂದ ಕೂಡಿದ್ದು, ಈ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಿಡಬ್ಲುೃಡಿ ಎಇಇ ವೆಂಕಟೇಶ್‌ಗೆ ಸೂಚಿಸಿದರು.

ರಾವಂದೂರು ಹೋಬಳಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ರಾಜ್ಯಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸುವುದರ ಜತೆಗೆ ಸರ್ಕಾರವು ನಿಗದಿಪಡಿಸಿದ ದಿನದೊಳಗೆ ತಾವು ಅರ್ಜಿಯನ್ನು ಸಲ್ಲಿಸಬೇಕು. ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಚಾಮರಾಜನಗರ ಜಿಲ್ಲೆಯಲ್ಲಿ 99ರಷ್ಟು ಪ್ರಯೋಜನ ಪಡೆಯುವ ಮೂಲಕ ರಾಜ್ಯದಲ್ಲೇ ಪ್ರಥಮ ಜಿಲ್ಲೆಯಾಗಿದೆ. ಅದೇ ರೀತಿ ಪಿರಿಯಾಪಟ್ಟಣ ತಾಲೂಕಿನಲ್ಲಿಯೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಗ್ರಾ.ಪಂ. ನೂತನ ಅಧ್ಯಕ್ಷೆ ಸುನೀತಾವಾಸು, ಉಪಾಧ್ಯಕ್ಷೆ ರಮ್ಯಾ, ತಹಸೀಲ್ದಾರ್ ಕುಂಜಿಮೊಹಮ್ಮದ್, ತಾಪಂ ಇಒ ಸುನೀಲ್‌ಕುಮಾರ್, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಾಮತ್‌ಜಾನ್‌ಬಾಬು, ಕೆಪಿಸಿಸಿ ಸದಸ್ಯ ನಿತಿನ್‌ವೆಂಕಟೇಶ್, ಮುಖಂಡರಾದ ಆರ್.ವಿ.ಶಿವಮೂರ್ತಿ, ಕೆ.ಹೊಲದಪ್ಪ, ಆರ್.ಎಸ್.ಕುಮಾರ್‌ವಿಜಯ್, ಆರ್.ಎಸ್.ಮಹೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್.ಎಸ್.ವಿಜಯ್‌ಕುಮಾರ್, ಉಪತಹಸೀಲ್ದಾರ್ ಕೆ.ಶುಭಾ, ಪಿಡಿಒ ಮಲ್ಲೇಶ್, ಕಾರ್ಯದರ್ಶಿ ಬಸವರಾಜು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net