ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ಮಾಡಿ, ವಿವಿಧ ಬೇಡಿಕೆ ಈಡೇರಿಸಲು ಆನೇಕಲ್‌ನಲ್ಲಿ ಪ್ರತಿಭಟನೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ

19ank news and photos 02
Published on

ಆನೇಕಲ್: ಗುತ್ತಿಗೆ ಆಧಾರದಲ್ಲಿ ದುರಿಯುತ್ತಿರುವ ಪೌರಕಾರ್ಮಿಕರನ್ನು ಕಾಯಂ ಮಾಡಿ, ಸರ್ಕಾರದ ಸೌಲಭ್ಯ ಕಲ್ಪಿಸುವಂತೆ ಆನೇಕಲ್ ಪುರಸಭೆ ಪೌರಕಾರ್ಮಿಕ ಶ್ರೀನಿವಾಸ್ ಆಗ್ರಹಿಸಿದರು.

ಪಟ್ಟಣದಲ್ಲಿ ಪಾಲಿಕೆ, ನಗರಸಭೆ, ಪುರಸಭೆ, ಪಪಂ ಹೊರಗುತ್ತಿಗೆ ನೌಕರರ ಸಂಘದಿಂದ ರಾಜ್ಯವ್ಯಾಪಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಭಾಗವಾಗಿ ಪಟ್ಟಣದಲ್ಲಿಯೂ ಮೆರವಣಿಗೆ ನಡೆಸಿ ಮಾತನಾಡಿದರು.

ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಸ ಸಾಗಿಸುವ ವಾಹನ ಚಾಲಕರು, ವಾಟರ್ ಮನ್, ಡೆಟಾ ಆಪರೇಟರ್ಸ್, ಕಸ ನಿರ್ವಹಣೆ ಸಹಾಯಕರು, ಒಳಚರಂಡಿ ಕಾರ್ಮಿಕರು, ಸ್ಮಶಾನ ಕಾವಲುಗಾರರು ಹಾಗೂ ಪೌರಕಾರ್ಮಿಕರ ನೇರ ನೇಮಕಾತಿ ಮಾಡಲು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಆಗ್ರಹಿಸಿದ್ದರೂ ಗುತ್ತಿಗೆ ಪದ್ಧತಿಯನ್ನೇ ಮುಂದುವರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುತ್ತಿಗೆ ನೌಕರರಿಗೆ ಕನಿಷ್ಠ ಸಂಬಳವನ್ನೂ ನೀಡದ ಪರಿಣಾಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲಾಗದ ಸ್ಥಿತಿ ಇದೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಹುದ್ದೆಗಳನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಪೌರಕಾರ್ಮಿಕ ಸಂಪಂಗಿ ಮಾತನಾಡಿ, ಪ್ರತಿದಿನ ಸಾರ್ವಜನಿಕರ ಸೇವೆ ಮಾಡುವ ನಮ್ಮ ಕುಟುಂಬಗಳಿಗೆ ಭದ್ರತೆ ಇಲ್ಲದಂತಾಗಿದೆ. ಕರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಪೌರಕಾರ್ಮಿಕರು ಕೆಲಸ ಮಾಡಿದ್ದಾರೆ ಎಂದರು.

ಮೂವತ್ತು ವರ್ಷಗಳಿಂದಲೂ ನಮ್ಮನ್ನು ದುಡಿಮೆಯ ಎತ್ತುಗಳಂತೆ ದುಡಿಸಿಕೊಳ್ಳುವ ನಮ್ಮನ್ನಾಳುವ ಸರ್ಕಾರಗಳು, ನಮ್ಮ ಬೇಡಿಕೆ ಈಡೇರಿಸಲು ಮುಂದಾಗದಿರುವುದು ಬೇಸರ ತರಿಸಿದೆ. ನಮ್ಮ ಹಕ್ಕು ಪಡೆಯಲು ರಾಜ್ಯವ್ಯಾಪಿ ಹೋರಾಟ ಕೈಗೊಳ್ಳಲಾಗಿದೆ ಎಂದರು.

ತಲಾ 500 ಮಂದಿಗೆ ಒಬ್ಬರಂತೆ ಪೌರಕಾರ್ಮಿಕರನ್ನು ನಿಯೋಜಿಸಿ, ಬಾಕಿ ಉಳಿದಿರುವ ಪೌರಕಾರ್ಮಿಕರ ಹುದ್ದೆಗಳನ್ನು ಎರಡನೇ ಹಂತದಲ್ಲಿ ಕಾಯಂಗೊಳಿಸಬೇಕು. ಹೊರಗುತ್ತಿಗೆ ನೌಕರರಿಗೆ ಹಲವಾರು ತಿಂಗಳಿಂದ ಪಾವತಿಯಾಗದ ವೇತನವನ್ನು ಶೀಘ್ರವೇ ಪಾವತಿಸಬೇಕು ಎಂದರು.

ಪಟ್ಟಣದ ದೇವರಕೊಂಡ ವೃತ್ತದಿಂದ ನೂರಾರು ಪೌರಕಾರ್ಮಿಕರು ತಾಲೂಕು ಕಚೇರಿವರೆಗೆ ಪ್ರತಿದಿನ ಸ್ವಚ್ಛತೆಗೆ ಬಳಸುತ್ತಿದ್ದ ಸಲಕರಣೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮೇಸ್ತ್ರಿ ಶ್ರೀನಿವಾಸ್, ಪೌರಕಾರ್ಮಿಕರಾದ ವೆಂಕಿ, ಶಿವು, ಆಂಜಿನಪ್ಪ, ಸಂಪಂಗಿ, ಮಧು, ವಿ.ಮಂಜುನಾಥ್, ನಾಗೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net