ಗುತ್ತಿಗೆ ನೌಕರರಿಂದ ಬೆಂಗಳೂರಿನಲ್ಲಿ ಧರಣಿ ಆಗಸ್ಟ್ 10ರಿಂದ

h23-KPTCL
Published on

ಹುಬ್ಬಳ್ಳಿ: ಕೆಪಿಟಿಸಿಎಲ್ ಹಾಗೂ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳಲ್ಲಿ ಕಳೆದ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಕಾಯಂ ಮಾಡಬೇಕೆಂದು ಆಗ್ರಹಿಸಿ ಆಗಸ್ಟ್ 10ರಿಂದ ಬೆಂಗಳೂರಿನ ಫ್ರೀಡಮ್ ಪಾರ್ಕ್​ನಲ್ಲಿ ಆನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಲೀಲಾಸಾಗರ ಎಂ.ಎಸ್. ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 10,200 ಜನ ಸ್ಟೇಶನ್ ಆಪರೇಟರ್, ಸ್ಟೇಶನ್ ಸಹಾಯಕರು, ಗ್ಯಾಂಗಮನ್, ಮೀಟರ್ ರೀಡರ್ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲ ಸೇವಾ ಭದ್ರತೆ ಇಲ್ಲವಾಗಿದೆ. ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಗಾಯಗೊಂಡರೆ ಏನೂ ಸಿಗುವುದಿಲ್ಲ ಎಂದು ದೂರಿದರು.

ಪ್ರತಿ ತಿಂಗಳು 7ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಆದರೆ, ಗುತ್ತಿಗೆದಾರರು 25ರ ಬಳಿಕ ಪಾವತಿಸುತ್ತಾರೆ. ನೌಕರರ ವೇತನದಲ್ಲಿ ಕಡಿತ ಮಾಡಲಾದ ಇಎಸ್​ಐ, ಪಿಎಫ್ ವಂತಿಗೆಯನ್ನು ಸಂಬಂಧಪಟ್ಟ ಇಲಾಖೆಗೆ ಗುಂತಾಯಿಸಲು ಪ್ರತಿ ಸಲ ವಿಳಂಬ ಮಾಡುತ್ತಿದ್ದಾರೆ. ಕೆಲ ಗುತ್ತಿಗೆದಾರರು ವೇತನದಲ್ಲಿ ಶೇ. 30ರಿಂದ 40ರಷ್ಟು ಕಡಿತ ಮಾಡಿಕೊಂಡು ಪಾವತಿಸುತ್ತಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net