ಗುತ್ತಿಗೆ ನೌಕರರ ಅಹವಾಲು ಆಲಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ

28-06--krs2
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆಯ ಕಾವೇರಿ ನೀರಾವರಿ ನಿಗಮದ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೂರಾರು ಗುತ್ತಿಗೆ ನೌಕರರಿಗೆ 5 ತಿಂಗಳಾದರೂ ಸಂಬಳ ನೀಡದ ಗುತ್ತಿಗೆದಾರರ ವಿರುದ್ಧ ಕಾರ್ಮಿಕ ಇಲಾಖೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಕಾರ್ಮಿಕ ಅಧಿಕಾರಿ ಮಂಜುಳಾ ಕೆಆರ್‌ಎಸ್‌ಗೆ ಭೇಟಿ ನೀಡಿ ಗುತ್ತಿಗೆ ನೌಕರರಿಂದ ಅಹವಾಲು ಸ್ವೀಕರಿಸಿದರು.


ಫೆಬ್ರವರಿ ತಿಂಗಳಿನಿಂದ ವೇತನ ನೀಡಿಲ್ಲ. 15 ವರ್ಷಗಳಿಂದ ಕೆಲಸ ಮಾಡುತ್ತಿದ್ದ 6 ನೌಕರರನ್ನು ಯಾವುದೇ ಮಾಹಿತಿ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಾರ್ಮಿಕರು ಅಧಿಕಾರಿಗೆ ಮಾಹಿತಿ ನೀಡಿದರು.


ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಚರ್ಚಿಸಿ ನಂತರ ನೌಕರರಿಂದ ಪ್ರತ್ಯೇಕವಾಗಿ ಸಮಸ್ಯೆಗಳನ್ನು ಕೇಳಿ ಮಾಹಿತಿ ದಾಖಲಿಸಿಕೊಂಡರು.


15 ವರ್ಷಗಳಿಂದ ಕೆಲಸ ಮಾಡುತ್ತಿದ್ದ 6 ನೌಕರರಿಗೆ ಯಾವುದೇ ನೋಟಿಸ್ ನೀಡದೆ ಅಥವಾ ಕಾರಣ ಹೇಳದೆ ಗುತ್ತಿಗೆದಾರ ಮತ್ತು ಅಧಿಕಾರಿಗಳು ಕೆಲಸದಿಂದ ತೆಗೆದಿರುವುದು ಸರಿಯಾದ ಕ್ರಮವಲ್ಲ. ಅವರಿಂದ ಮಾಹಿತಿ ಸಂಗ್ರಹಿಸಿದ್ದೇನೆ, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದರು.


ನೌಕರರಿಗೆ ಪ್ರತಿ ತಿಂಗಳು ಗುತ್ತಿಗೆದಾರ ಸಂಬಳ ನೀಡುತ್ತಿಲ್ಲ, ಇಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸುರಕ್ಷತೆ, ಯಾವುದೇ ಸಲಕರಣೆ ಅಥವಾ ಸೌಲಭ್ಯ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಿಲ್ಲ. ಸಂಬಳ ನೀಡಲು ಕಾವೇರಿ ನೀರಾವರಿ ನಿಗಮದ ಬಳಿ ಹಣವಿಲ್ಲ. ಪ್ರತಿ ತಿಂಗಳು ಕೆ.ಆರ್.ಸಾಗರ ವಿಭಾಗಕ್ಕೆ 40ರಿಂದ 50 ಲಕ್ಷ ರೂ. ಅಗತ್ಯ ಇದೆ. ಬಜೆಟ್ ಮಂಡನೆ ಬಳಿಕ ಹಣ ಬಿಡುಗಡೆಯಾಗುತ್ತದೆಂದು ನಿಗಮದ ಅಧಿಕಾರಿಗಳು ತಿಳಿಸಿರುವುದಾಗಿ ಮಂಜುಳಾ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net