ಗುತ್ತಿಗೆ ನೀಡುವ ಭೂಮಿಯನ್ನು 50 ಎಕ್ಕರೆಗೆ ಹೆಚ್ಚಿಸಬೇಕು: ಚೇತನ್‌ಕುಮಾರ್

ಗುತ್ತಿಗೆ ನೀಡುವ ಭೂಮಿಯನ್ನು 50 ಎಕ್ಕರೆಗೆ ಹೆಚ್ಚಿಸಬೇಕು: ಚೇತನ್‌ಕುಮಾರ್
Published on

ಬೇಲೂರು: ಕಾಫಿ ಬೆಳೆಗಾರರಿಗೆ ಸರ್ಕಾರಿ ಭೂಮಿಯನ್ನು ಲೀಸ್‌ಗೆ(ಭೋಗ್ಯಕ್ಕೆ) ನೀಡಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹವಾಗಿದ್ದು, ಗುತ್ತಿಗೆ ನೀಡುವ ಭೂಮಿಯನ್ನು 50 ಎಕ್ಕರೆಗೆ ಹೆಚ್ಚಿಸಬೇಕು ಎಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಚೇತನ್‌ಕುಮಾರ್ ಹೇಳಿದರು.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಫಿ ಬೆಳೆಗಾರರ ಸಂಘ ಅವಿರತವಾಗಿ ನಡೆಸಿದ ಹೋರಾಟ ಫಲವಾಗಿ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಲೆನಾಡು ಭಾಗದ ಕಾಫಿ ಬೆಳೆಗಾರರಿಗೆ ಕಂದಾಯ ಭೂಮಿಯನ್ನು 30 ವರ್ಷ ಭೋಗ್ಯಕ್ಕೆ ನೀಡಲು ನಿರ್ಧರಿಸಿ, ಗುತ್ತಿಗೆ ಪಡೆದ ಭೂಮಿಯನ್ನು ಯಾವ ಕಾರಣಕ್ಕೂ ಪರಬಾರೆ, ಅಡಮಾನ ಮಾಡುವಂತಿಲ್ಲವೆಂದು ಸಾಕಷ್ಟು ಷರುತ್ತುಗಳನ್ನು ಹಾಕಿದೆ. ಇದ್ದರಿಂದ ಸಣ್ಣ ಕಾಫಿ ಬೆಳೆಗಾರರಿಗೆ ಅನುಕೂಲವಾಗಲಿದೆ. ಇದಕ್ಕೆ ಸಹಕರಿಸಿದ ಮುಖ್ಯಮಂತ್ರಿ, ಕಂದಾಯ ಮಂತ್ರಿಗೆ ಅಭಿನಂಧನೆ ಸಲ್ಲಿಸುತ್ತೇವೆ. ಈ ಹಿಂದೆ ಕಂದಾಯ ಮಂತ್ರಿ ಆರ್.ಆಶೋಕ್‌ರವರು ಮಲೆನಾಡು ಭಾಗದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿ ಕಾಫಿ ಬೆಳೆಗಾರರ ಸಮಸ್ಯೆ ಆಲಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದ್ದರಿಂದ ಕಾಫಿ ಬೆಳೆಗಾರರಿಗೆ ನಿಜಕ್ಕೂ ಅನುಕೂಲವಾಗಿದೆ. ಆದರೆ ಗುತ್ತಿಗೆ ಪಡೆಯುವ ಭೂಮಿ ಬೆಲೆ ತಿಳಿಸಿಲ್ಲ, ಅಲ್ಲದೆ 30 ಎಕ್ಕರೆ ನಿಗಧಿ ಮಾಡಿದ್ದು, ಇದರ ಬದಲಾಗಿ 50 ಎಕರೆಗೆ ಏರಿಕೆ ಮಾಡಬೇಕು ಎಂದರು.


ಕಾಫಿ ಬೆಳೆಗಾರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ತೋ.ಚ.ಅನಂತ ಸುಬ್ಬರಾಯ ಮಾತನಾಡಿ, ಭೂ ಒತ್ತುವರಿ ಸಮಸ್ಯೆ ಬಗ್ಗೆ ಕಾಫಿ ಬೆಳೆಗಾರರ ಸಂಘವು ಸಿದ್ದರಾಮಯ್ಯನವರ ಸರ್ಕಾರದ ಸಂದರ್ಭ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೆವು. ಆದರೆ ಈಗ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಉತ್ತಮವಾಗಿದೆ. ಇದರಿಂದ ಹೆಚ್ಚು ಒತ್ತುವರಿ ಮಾಡಿದವರಿಗೆ ಕಷ್ಟವಾಗಬಹುದು. ಈಗಾಗಲೇ 10 ಹೆಚ್‌ಪಿ ಮೋಟರ್ ವಿದ್ಯುತ್‌ಗೆ ಅವಕಾಶ ನೀಡಬೇಕು ಮತ್ತು ವಿದ್ಯುತ್ ಬಾಕಿ ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದೇವೆ. ಜತೆಗೆ ನಾವು ಯಾವುದೇ ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ. ಕಾಡಾನೆ ಸಮಸ್ಯೆ ಹೆಚ್ಚಾದ ಕಾರಣ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡಲು ಸಾದ್ಯವಾಗಿಲ್ಲ, ಕಾರ್ಮಿಕರು ಭಯದಿಂದ ಕೆಲಸಕ್ಕೆ ಬರುತ್ತಿಲ್ಲ, ಕಾಡಾನೆ ಸಮಸ್ಯೆಗೆ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.


ಸುದ್ದಿಗೋಷ್ಟಿಯಲ್ಲಿ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಸಂಜಯ್, ಜಿಲ್ಲಾ ನಿರ್ದೇಶಕ ವೈ.ಎಸ್.ಸಿದ್ದೇಶಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net