ಗುತ್ತಿಗೆ ಕಾರ್ಮಿಕರ ಶೋಷಣೆ ನಿರಂತರ

mysore
Published on

ಮೈಸೂರು: ಜನರ ಆರೋಗ್ಯವನ್ನು ಸುಧಾರಿಸಿದ ಆಸ್ಪತ್ರೆಗಳಾದ ಕೆ.ಆರ್.ಆಸ್ಪತ್ರೆ, ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆಗಳಲ್ಲಿ ಕಳೆದ 15-20 ವರ್ಷಗಳಿಂದ ಆಯಾ, ಪೌರ ಕಾರ್ಮಿಕರು, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಆಡಳಿತ ವರ್ಗದ ಶೋಷಣೆಗೆ ತುತ್ತಾಗಿದ್ದಾರೆ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಎಂ.ಉಮಾದೇವಿ ಹೇಳಿದರು.

ಎಂಎಂಸಿಆರ್‌ಐ ಯುನೈಟೆಡ್ ಕಾಂಟ್ರಾೃಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಗುತ್ತಿಗೆ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು.

ಆರೋಗ್ಯದಂತಹ ತುರ್ತು ಸೇವೆಯ ಕ್ಷೇತ್ರದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸೇವೆ ಸಲ್ಲಿಸುವವರನ್ನು ಶಾಸನಬದ್ಧ ಸೌಲಭ್ಯ ನೀಡದೇ ವಂಚಿಸಲಾಗುತ್ತಿದೆ. ಅಡಳಿತ ವರ್ಗ, ಗುತ್ತಿಗೆದಾರರ ಶೋಷಣೆ ವಿರೋಧಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ಸಂಘಟಿತರಾದ ನಂತರ ಒಂದಷ್ಟು ಸೌಲಭ್ಯ ಪಡೆದುಕೊಳ್ಳಲಾಗಿದೆ. ಆದರೆ ಇದು ಸಾಲದು. ಸಂಘಟನೆ ಬಲಪಡಿಸಿಕೊಳ್ಳುವ ಮೂಲಕ ಈ ಗುತ್ತಿಗೆ ಪದ್ಧತಿಯನ್ನೇ ರದ್ದುಗೊಳಿಸಿ, ಕಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳುವಂತಹ ಹೋರಾಟವನ್ನು ಕಟ್ಟಬೇಕು ಎಂದು ಹೇಳಿದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ, ಸಂಘದ ಅಧ್ಯಕ್ಷ ಚಂದ್ರಶೇಖರ ಮೇಟಿ ಮಾತನಾಡಿ, ಕಾರ್ಮಿಕರು ಸರಿಯಾದ ವೈಚಾರಿಕ ತಿಳಿವಳಿಕೆಯೊಂದಿಗೆ ಸಂಘಟಿತರಾಗಿ ಹೋರಾಟವನ್ನು ಕಟ್ಟಿದರೆ ಮಾತ್ರವೇ ಯಶಸ್ಸು ಪಡೆಯಲು ಸಾಧ್ಯ. ಗುತ್ತಿಗೆದಾರರು ಸಂಘದ ಯಶಸ್ಸನ್ನು ಸಹಿಸದೇ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ಮತ್ತಷ್ಟು ಒಗ್ಗಟ್ಟಾಗಿ ತಮ್ಮ ಹಕ್ಕು ಪಡೆಯಲು ಮುಂದಾಗಬೇಕು ಎಂದರು.

ಸಾಮಾಜಿಕ ಹೋರಾಟಗಾರ ಉಗ್ರನರಸಿಂಹೇಗೌಡ ಮಾತನಾಡಿ, ಕೆ.ಆರ್.ಆಸ್ಪತ್ರೆಯೇ ಅನಾರೋಗ್ಯಕ್ಕೆ ಈಡಾಗಿರುವುದು ದುರದೃಷ್ಟಕರ. ಸಮಾಜದ ರೋಗ ರುಜಿನ ನಿವಾರಿಸಬೇಕಾದ ಈ ಆಸ್ಪತ್ರೆಗಳೇ ಖುದ್ದು ರೋಗಗ್ರಸ್ತವಾಗಿದೆ. ಗುತ್ತಿಗೆ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ಮಾದರಿ ಉದ್ಯೋಗದಾತರಾಗಬೇಕಿದ್ದ ಸರ್ಕಾರಿ ಸಂಸ್ಥೆಯೇ ಗುತ್ತಿಗೆದಾರರ ಜತೆ ಸೇರಿ ಕನಿಷ್ಠ ಸೌಲಭ್ಯಗಳಿಂದ ಕಾರ್ಮಿಕರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಎಐಯುಟಿಯುಸಿ ಜಿಲ್ಲಾಧ್ಯಕ್ಷ ವಿ.ಯಶೋಧರ್, ಆಶಾ ಕಾರ್ಯಕರ್ತೆಯರ ಜಿಲ್ಲಾ ಗೌರವ ಅಧ್ಯಕ್ಷೆ ಪಿ.ಎಸ್.ಸಂಧ್ಯಾ, ಸಂಘದ ಉಪಾಧ್ಯಕ್ಷ ಮುದ್ದುಕೃಷ್ಣ ಮತ್ತು ಕಾರ್ಯದರ್ಶಿ ಎಸ್.ಎಚ್.ಹರೀಶ್, ಪದಾಧಿಕಾರಿಗಳಾದ ಅಕ್ಕಮಹಾದೇವಿ, ಟಿ.ಕೆ.ಹರೀಶ್ , ರೈಲ್ವೆ ಶ್ರೀನಿವಾಸ್, ಅರವಿಂದ್, ಮಹೇಶ್, ಮಲ್ಲಿಗಮ್ಮ, ಇಂದ್ರಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net