ಗುತ್ತಿಗೆ ಆಧಾರಿತ ಪೌರಕಾರ್ಮಿಕರ ಸೇವೆ ಕಾಯಂ: ಎಂ.ಶಿವಣ್ಣ ಭರವಸೆ

9
Published on

ಮೈಸೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.


ಕನ್ನಡ ಜಾನಪದ ಪರಿಷತ್‌ನ 6ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ರೋಟರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಜಾನಪದ ಹಾಗೂ ಬುಡಕಟ್ಟು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮೊದಲ ಹಂತದಲ್ಲಿ 11,133 ಪೌರಕಾರ್ಮಿಕರು ಕಾಯಂ ಆಗಲಿದ್ದು, ಒಟ್ಟಾರೆ 50 ಸಾವಿರ ಪೌರಕಾರ್ಮಿಕರ ಸೇವೆಯನ್ನು ಕಾಯಂ ಮಾಡುವ ಉದ್ದೇಶ ಇದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸುವ ಪದ್ಧತಿ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಸದ್ಯದಲ್ಲೇ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಲಿದೆ. ನನ್ನ ಬಳಿ ಕೂಡ ಹಲವರು ಬಂದು, ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಕೋರಿದರು. ಆದ್ದರಿಂದ ಅರ್ಜಿ ಆಹ್ವಾನಿಸುವುದು, ಶಿಫಾರಸು ಮಾಡುವುದನ್ನು ಕೈಬಿಟ್ಟು ಅರ್ಹ ಸಾಧಕರನ್ನು ರಾಜ್ಯ ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಬೇಕು ಎಂದು ಹೇಳಿದರು.


ಪ್ರಸ್ತುತ ಆಧುನಿಕ ಕಾಲದಲ್ಲೂ ಜಾನಪದ ಜೀವಂತವಾಗಿದೆ. ಕನ್ನಡ ಜಾನಪದ ಪರಿಷತ್ ಸ್ವತಃ ಕಲಾವಿದರನ್ನು ಗುರುತಿಸಿ, ಗೌರವಿಸಬೇಕು. ಆಗ ಮಾತ್ರ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ತಿಳಿಸಿದರು.


ಕಲಾವಿದರಿಗೆ ಸನ್ಮಾನ:
ಕಲಾವಿದರಾದ ನಂಜನಗೂಡು ತಾಲೂಕಿನ ಮಲ್ಕುಂಡಿಯ ಬಸವಣ್ಣ(ವೀರಗಾಸೆ ), ಮೈಸೂರು ತಾಲೂಕಿನ ಯರಗನಹಳ್ಳಿಯ ಮಾದಮ್ಮ(ಸೋಬಾನೆ), ಮುರಡಗಳ್ಳಿಯ ಮಹದೇವಯ್ಯ(ಕಂಸಾಳೆ), ವಿನಾಯಕನಗರದ ನಿಖಿಲ್(ಡೊಳ್ಳುಕುಣಿತ ), ಬುಡಕಟ್ಟು ಕ್ಷೇತ್ರದ ಬೆಟ್ಟಕುರುಬ ಸಮುದಾಯದ ಸರಗೂರು ತಾಲೂಕಿನ ಆನೆಮಾಳದ ಜೋಮಮ್ಮ, ಜೇನುಕುರುಬ ಬುಡಕಟ್ಟು ಸಮುದಾಯದ ರಾಣಿಗೇಟ್ ಹಾಡಿಯ ಜೆ.ಡಿ.ಜಯಪ್ಪ, ಯರವ ಬುಡಕಟ್ಟು ಸಮುದಾಯದ ಎಚ್.ಡಿ. ಕೋಟೆ ಗೋಳೂರು ಹಾಡಿಯ ತೋಲಯ್ಯ, ಸೋಲಿಗ ಬುಡಕಟ್ಟು ಸಮುದಾಯದ ಹುಣಸೂರು ತಾಲೂಕಿನ ಹೆಮ್ಮಿಗೆಹಾಡಿಯ ಹರ್ಷ, ಎಚ್.ಡಿ. ಕೋಟೆ ತಾಲೂಕಿನ ಜಾನಪದ ಹಾಡುಗಾರರಾದ ಪಿ.ಸೋಮಶೇಖರ್, ಪದ್ಮರಾಜ್ ಅವರನ್ನು ಸನ್ಮಾನಿಸಲಾಯಿತು.


ಪರಿಷತ್ ಅಧ್ಯಕ್ಷ ಎಸ್.ಬಾಲಾಜಿ , ಜಿಲ್ಲಾಧ್ಯಕ್ಷ ಎಚ್.ಕ್ಯಾತನಹಳ್ಳಿ ಪ್ರಕಾಶ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮಾಪನಶಾಸ್ತ್ರದ ಸಹಾಯಕ ನಿಯಂತ್ರಕ ಎಂ.ಎಸ್. ಕುಮಾರ್, ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಅಧ್ಯಕ್ಷ ಎನ್.ಬೆಟ್ಟೇಗೌಡ, ಎಚ್.ಡಿ. ಕೋಟೆ ಕುರುಬರ ಸಂಘದ ಅಧ್ಯಕ್ಷ ಎಂ.ಬಿ.ಆನಂದ್, ಪರಿಷತ್ ವಿಭಾಗೀಯ ಸಂಚಾಲಕಿ ಕಾವೇರಿ ಪ್ರಕಾಶ್, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಬಿ.ಪಿ.ಬೋರೇಗೌಡ, ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ತನುಮನ ಸಂಸ್ಥೆ ಅಧ್ಯಕ್ಷ ಲಕ್ಷ್ಮೀರಾಮ್, ಪರಿಷತ್ ಕಾರ್ಯದರ್ಶಿ ಕೆ.ಸಿ. ಕಾಂತಪ್ಪ ಪಾಲ್ಗೊಂಡಿದ್ದರು.

ಜಾನಪದ ಗೀತಗಾಯನ
ಮೈಸೂರಿನ ಪನ್ನಗ ವಿಜಯ್‌ಕುಮಾರ್ ತಂಡ, ಎಚ್.ಡಿ.ಕೋಟೆಯ ಮರಿಸ್ವಾಮಿ ಸರ್ವಾಥ್ ತಂಡ, ಸುಮಂತ್ ವಶಿಷ್ಠ ತಂಡ, ಎಚ್.ಡಿ. ಕೋಟೆಯ ಮಲಾರ ಗಣೇಶ ತಂಡ, ಪುಷ್ಪಲತಾ ತಂಡ, ಸರಗೂರು ತಾಲೂಕಿನ ದೇವರಾಜು ಆನಗಟ್ಟಿ ತಂಡ, ಎಚ್.ಡಿ. ಕೋಟೆ ತಾಲೂಕಿನ ದೇವಲಾಪುರದ ಅಮ್ಮ ರಾಮಚಂದ್ರ ತಂಡ, ಪಿ.ಪುನೀತ್‌ಕುಮಾರ್, ಅಜಯ್‌ಕುಮಾರ್ ಮತ್ತು ಸೋಮು ತಂಡ, ಹುಣಸೂರು ತಾಲೂಕು ವಸಂತ ಹೊನ್ನೇನಹಳ್ಳಿ ತಂಡ, ಕಂಸಾಳೆ ಮಾದೇವ ತಂಡ, ಕೊಳ್ಳೇಗಾಲ ತಾಲೂಕಿನ ಶಿವಮ್ಮ ಸತ್ತೇಗಾಲ ತಂಡ, ಪ್ರಸನ್ನ ಪಾಂಡವಪುರ, ಚಿರಂಜೀವಿ, ಚಂದ್ರು, ತೇಜು, ರಾಕೇಶ್, ರಾಜೇಶ್ವರಿ, ಕೆ.ಪಿ. ಪ್ರೇಮಕುಮಾರಿ, ಕಳಸೂರು ರಾಜು ತಂಡದವರು ಜಾನಪದ ಗೀತ ಹಾಡಿ ಸಭಿಕರನ್ನು ರಂಜಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net