ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ

1812Klb12
Published on

ಕಲಬುರಗಿ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳಲ್ಲಿ ಅಕ್ಷರ ಜ್ಞಾನದ ಜತೆಗೆ ಮಾನವೀಯ ಮೌಲ್ಯ, ನವ ಕೌಶಲಗಳನ್ನು ಹೆಚ್ಚಿಸಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಸಲಹೆ ನೀಡಿದರು.

ನಗರದ ಹೊರವಲಯದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪ್ರೌಢ ಶಾಲೆ ಮುಖ್ಯೋಪಾಧ್ಯಯರ ಸಂಘ, ಕಿರಿಯ ಕಾಲೇಜು ಪ್ರಾಂಶುಪಾಲರ ಸಂಘದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಸರ್ಕಾರಿ, ಅನುದಾನಿತ ಪ್ರೌಢ ಶಾಲೆ ಮುಖ್ಯಗುರುಗಳ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿಯಿಂದ ಶೇ.೨೫ ಅನುದಾನ ಮೀಸಲಿಡಲಾಗಿದೆ. ಎಲ್ಲ ಸೌಲಭ್ಯಗಳನ್ನು ಪಡೆಯುವ ಜತೆಗೆ ನಮ್ಮ ಭಾಗದ ಫಲಿತಾಂಶ ವೃದ್ಧಿಗೆ ಪರಸ್ಪರ ಸಹಕಾರದಿಂದ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಉದ್ಘಾಟಿಸಿ ಮಾತನಾಡಿ, ನಕಲು ಮುಕ್ತ ಪರೀಕ್ಷೆ ನಡೆಯಲು ಎಲ್ಲರೂ ಸಹಕಾರಿಸಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಶಿಕ್ಷಕರು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರಿ ಶಾಲೆಗಳಿಗೆ ಬಡ ಮಕ್ಕಳು ಅಧ್ಯಯನಕ್ಕೆ ಬರುತ್ತಾರೆ. ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮ ವಹಿಸಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಮರೆಪ್ಪ ಬಸವಪಟ್ಟಣ, ಎಸ್.ಆರ್.ಮನ್ನಳ್ಳಿ, ನರೇಂದ್ರ ಬಡಶೇಷಿ, ಡಾ.ಶಶಿಶೇಖರರೆಡ್ಡಿ ಇತರರಿದ್ದರು. ೩೦೦ ಕ್ಕೂ ಹೆಚ್ಚು ಮುಖ್ಯಗುರುಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ರಾಜಶೇಖರ ತಲಾರಿ ಸ್ವಾಗತಿಸಿದರು. ಬಿ.ಜಿ.ವಣಿಕ್ಯಾಳ ನಿರೂಪಣೆ ಮಾಡಿದರು. ಅಶೋಕ ರಡ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net