

ಮಳವಳ್ಳಿ: ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಉತ್ಪಾದಕರೂ ಉತ್ತಮ ಬೆಲೆ ಪಡೆಯುವುದರ ಜತೆಗೆ ಸಹಕಾರ ಸಂಘ ಆರ್ಥಿಕವಾಗಿ ಸದೃಢಗೊಳಿಸಬೇಕು ಎಂದು ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಸಲಹೆ ನೀಡಿದರು.
ತಾಲೂಕಿನ ರಾಗಿಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಮಂಡ್ಯ ಹಾಲು ಒಕ್ಕೂಟ ಮತ್ತು ಸರ್ಕಾರದಿಂದ ಸಿಗುವ ಎಲ್ಲ ರೀತಿಯ ಸವಲತ್ತುಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಬಹುತೇಕ ರೈತರ ಜೀವನ ಹೈನುಗಾರಿಕೆಯನ್ನು ಅವಲಂಬಿಸಿದೆ. ಕೆಲವರು ದೊಡ್ಡ ಮಟ್ಟದಲ್ಲಿ ಹೈನೋದ್ಯಮವನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ. ಇದೊಂದು ಸರಪಳಿ ರೀತಿಯ ವಹಿವಾಟು ನಡೆಯುವುದರಿಂದ ಗುಣಮಟ್ಟವೇ ಈ ಉದ್ಯಮದ ಆಧಾರ ಸ್ತಂಭವಾಗಿದೆ. ಆದ್ದರಿಂದ ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಹಕಾರ ಸರಪಳಿಯನ್ನು ಸದೃಢಪಡಿಸುವಂತೆ ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಶಿವಪ್ರಕಾಶ್ ವಾರ್ಷಿಕ ವರದಿಯನ್ನು ಮಂಡಿಸಿ, 2021-22 ನೇ ಸಾಲಿನಲ್ಲಿ ಸಂಘದಿಂದ 21,35,096 ರೂ. ಲಾಭ ಗಳಿಸುವುದರ ಜತೆಗೆ ಸಂಘದ ನಿರ್ವಹಣೆ ಹಾಗೂ ಇತರ ವೆಚ್ಚಗಳನ್ನು ಕಳೆದು 12,57,995 ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
ಹಾಲು ಉತ್ಪಾದಕರಿಗೆ ಅಭಿನಂದನೆ: ಸಂಘಕ್ಕೆ ಪ್ರಸ್ತುತ ಸಾಲಿನಲ್ಲಿ ಅತಿ ಹೆಚ್ಚು ಹಾಲು ಪೂರೈಸಿದ ನಿಂಗರಾಜು, ಮಹದೇವಸ್ವಾಮಿ, ಶಿವಪ್ರಸಾದ್ ಮತ್ತು ಹೆಚ್ಚು ಗುಣಮಟ್ಟದ ಹಾಲು ಸರಬರಾಜು ಮಾಡಿದ ಮಹೇಶ್, ಮಹದೇವಪ್ಪ, ಪಂಡಿತಾರಾಧ್ಯ ಅವರನ್ನು ಆಡಳಿತ ಮಂಡಳಿಯಿಂದ ಅಭಿನಂದಿಸಲಾಯಿತು.ಸಂಘದ ಅಧ್ಯಕ್ಷ ನಾಗೇಶ್ ಕುಮಾರ್, ಉಪಾಧ್ಯಕ್ಷ ಪ್ರವೀಣ್, ಒಕ್ಕೂಟದ ಶೇಖರಣಾ ವಿಭಾಗದ ವ್ಯವಸ್ಥಾಪಕ ಪ್ರಭಾಕರ್, ಉಪ ವ್ಯವಸ್ಥಾಪ ಮಧುಶಂಕರ್, ಪಶು ವೈದ್ಯಾಧಿಕಾರಿ ಡಾ.ಚೌಡೇಗೌಡ ಹಾಗೂ ನಿರ್ದೇಶಕರು ಇದ್ದರು.