ಗುಣಮಟ್ಟದ ಹಾಲು ಹೊರ ರಾಜ್ಯಗಳಿಗೂ ರಫ್ತು

ಪಾಂಡವಪುರದ ಮನ್‌ಮುಲ್ ಉಪಕಚೇರಿಯಲ್ಲಿ ರಾಸುಗಳ ಮಾಲೀಕರಿಗೆ ವಿಮೆ ಚೆಕ್‌ಗಳನ್ನು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ವಿತರಿಸಿದರು. ಮಂಜುನಾಥ್, ಉಷಾ, ಡಾ.ಪೂಜಾ ಇದ್ದರು.
28-pnp 3
Published on

ಪಾಂಡವಪುರ: ಹೈನುಗಾರಿಕೆ ಅಭಿವೃದ್ಧಿಗಾಗಿ ಒಕ್ಕೂಟ ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಹಾಲು ಉತ್ಪಾದಕರು ಹೆಚ್ಚಿನ ಆದಾಯ ಗಳಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಲಹೆ ನೀಡಿದರು.


ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ 14 ರಾಸುಗಳ ಮಾಲೀಕರಿಗೆ ವಿಮೆ ಚೆಕ್, ಕೋವಿಡ್‌ನಿಂದ ಮೃತಪಟ್ಟ ಕುಟುಂಬ ವರ್ಗಕ್ಕೆ ಸಹಾಯಧನ, ರೈತ ಕಲ್ಯಾಣ ಟ್ರಸ್ಟ್‌ನಿಂದ ಮೃತ ಹಾಲು ಉತ್ಪಾದಕರ ಕುಟುಂಬಕ್ಕೆ ನೆರವಿನ ಚೆಕ್‌ಗಳನ್ನು ಬುಧವಾರ ವಿತರಿಸಿ ಮಾತನಾಡಿದರು.


ಪಾಂಡವಪುರ ತಾಲೂಕು ಹಾಲು ಉತ್ಪಾದನೆ ಮತ್ತು ಗುಣಮಟ್ಟದಲ್ಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಗೆ ಪ್ರಥಮ ಸ್ಥಾನ ತಲುಪುವ ನಿಟ್ಟಿನಲ್ಲಿ ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಸರ್ಕಾರದ ಪ್ರೋತ್ಸಾಹ ಹಣ 5 ರೂ. ಸೇರಿ ಲೀಟರ್‌ಗೆ 33.21 ರೂ. ಸಿಗುತ್ತದೆ. ಇಲ್ಲವಾದರೆ ಪ್ರೋತ್ಸಾಹ ಹಣ ಸರ್ಕಾರಕ್ಕೆ ಹಿಂದಿರುಗುತ್ತದೆ ಎಂದರು.


ಹಾಲು ಗುಣಮಟ್ಟದಿಂದ ಕೂಡಿದ್ದರೆ ಹೊರ ರಾಜ್ಯಗಳಿಗೂ ರಫ್ತು ಮಾಡಬಹುದು ಎಂದು ತಿಳಿಸಿದರು. ಡೇರಿ ಕಾರ್ಯದರ್ಶಿಗಳು ಹಾಲಿನ ಗುಣಮಟ್ಟದ ವಿಚಾರದಲ್ಲಿ ರಾಜಿಯಾಗಬಾರದು. ಲೀಟರ್ ಹಾಲಿಗೆ 44 ರೂ. ಕೊಟ್ಟು ಖರೀದಿಸುವ ಗ್ರಾಹಕರಿಗೆ ನಾವು ನೀರು ಮಿಶ್ರಿತ ಹಾಲು ಕೊಡಲು ಸಾಧ್ಯವಿಲ್ಲ. ಕಾಲು, ಬಾಯಿ ಜ್ವರದ ಜತೆಗೆ ಎಮ್ಮೆ ಮತ್ತು ನಾಡ ಹಸುಗಳಿಗೆ ಚರ್ಮದ ಮೇಲೆ ಗಂಟುಗಳು ಉಲ್ಬಣಿಸುವ ರೋಗ ಕಾಣಿಸಿಕೊಳ್ಳುತ್ತಿದೆ. ಇದು ಶೀಘ್ರವಾಗಿ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಹರಡುವ ಸಾಧ್ಯತೆ ಇದ್ದು, ರಾಸುಗಳಲ್ಲಿ ಇದು ಕಂಡುಬಂದರೆ ತಕ್ಷಣ ಒಕ್ಕೂಟದ ವೈದ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಮನ್‌ಮುಲ್ ಮಾರ್ಗವಿಸ್ತರಣಾಧಿಕಾರಿಗಳಾದ ಮಂಜುನಾಥ್, ಉಷಾ, ಪಶುವೈದ್ಯೆ ಡಾ.ಪೂಜಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net