

ನೆಲಮಂಗಲ: ಬಮುಲ್‌ಗೆ ಗುಣಮಟ್ಟದ ಹಾಲು ಪೂರೈಕೆಯಲ್ಲಿ ನೆಲಮಂಗಲ 20 ತಿಂಗಳಿಂದ ಮೊದಲ ಸ್ಥಾನ ಕಾಯ್ದುಕೊಂಡಿದೆ ಎಂದು ಬಮುಲ್ ನಿರ್ದೇಶಕ ಜಿ.ಆರ್. ಭಾಸ್ಕರ್ ಹೇಳಿದರು.
ತಾಲೂಕಿನ ಬಾವಿಕೆರೆಯಲ್ಲಿ ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 11 ಲಕ್ಷ ರೂ. ವೆಚ್ಚದಲ್ಲಿ ಡೇರಿ ಕಟ್ಟಡ ಹಾಗೂ ಹಾಲು ಶೀತಲೀಕರಣ ಘಟಕವನ್ನು (ಬಿಎಂಸಿ) ನಿರ್ಮಿಸಲಾಗುವುದು ಎಂದರು.
ರಾಜ್ಯದಲ್ಲಿ ಲಕ್ಷಾಂತರ ಮಂದಿ ಹೈನುಗಾರಿಕೆಯನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಅರ್ಥಿಕವಾಗಿ ಮುಂದುವರಿದಿದ್ದಾರೆ. ಬಮುಲ್‌ನ ನಂದಿನಿ ಉತ್ಪನ್ನಗಳು ದೇಶವಿದೇಶದಲ್ಲಿ ಮಾರಾಟವಾಗುತ್ತಿವೆ. ಗ್ರಾಮೀಣ ಭಾಗದ ರೈತರು ಕೊಡುವ ಹಾಲಿನಿಂದ ಬಮುಲ್ ವಿಶ್ವಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
2 ಲಕ್ಷ ರೂ.ಗೆ 12 ಲಕ್ಷ ರೂ. ಬಿಲ್!: ಗ್ರಾಮೀಣ ಭಾಗದ ಜನರಿಗೆ ಶುದ್ಧಕುಡಿಯುವ ನೀರಿನ ಘಟಕದ ವ್ಯವಸ್ಥೆ ಕಲ್ಪಿಸುವುದು ಪ್ರತಿಯೊಬ್ಬ ಜನಪ್ರನಿಧಿಗಳ ಕರ್ತವ್ಯ. 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧಕುಡಿಯುವ ನೀರಿನ ಘಟಕಕ್ಕೆ ಕೆಲ ರಾಜಕೀಯ ವ್ಯಕ್ತಿಗಳು 12 ಲಕ್ಷ ರೂ. ವೆಚ್ಚ ಎಂದು ಬಿಲ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಜಿ.ಆರ್. ಭಾಸ್ಕರ್ ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಬಮುಲ್‌ನಿಂದ ನೂತನ ಡೇರಿಯಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಶುದ್ಧಕುಡಿಯುವ ನೀರಿನ ಘಟಕ ನಿರ್ಮಿಸಲಾಗುವುದು. ಇದುವರೆಗೆ ತಾಲೂಕಿನಾದ್ಯಂತ 36 ಘಟಕ ನಿರ್ಮಿಸಲಾಗಿದ್ದು, 15 ಘಟಕಗಳ ಈಗಾಗಲೇ ಕಾರ್ಯಾರಂಭಿಸಿವೆ ಎಂದು ಮಾಹಿತಿ ನೀಡಿದರು.
ನಿತ್ಯ 800 ಲೀಟರ್ ಹಾಲು ಸಂಗ್ರಹ: ಎರಡು ದಶಕಗಳ ಹಿಂದೆ ಬಾವಿಕೆರೆ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘ ಆರಂಭಿಸಿದಾಗ 50ಕ್ಕೂ ಹೆಚ್ಚು ಸದಸ್ಯರು ಇದ್ದರು. ಈಗ ನಿತ್ಯ 800 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಳೇ ಕಟ್ಟಡದಲ್ಲಿ ದೈನಂದಿನ ಕಾರ್ಯನಿರ್ವಹಣೆ ಕಷ್ಟವಾಗಿದ್ದರಿಂದ, ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕಿ ನಾಗರತ್ನಾ ಹೇಳಿದರು.
ಬಮುಲ್ ಟ್ರಸ್ಟ್ ಉಪವ್ಯವಸ್ಥಾಪಕ ಎ.ಆರ್. ಗೋಪಾಲಗೌಡ, ಬೆಂಗಳೂರು ಸಹಕಾರಿ ಯುನಿಯನ್ ನಿರ್ದೇಶಕ ಜಗದೀಶ್, ಗುರುವನಹಳ್ಳಿ ಡೇರಿ ಕಾರ್ಯದರ್ಶಿ ರಾಜಗೋಪಾಲ್, ಗ್ರಾಪಂ ಉಪಾಧ್ಯಕ್ಷೆ ಧನಲಕ್ಷ್ಮೀ, ಸದಸ್ಯ ಮಹಾಂತೇಶ್, ಸಿದ್ದರಾಜು, ಶೈಲಜಾ, ಗ್ರಾಮದ ಮಹಿಳಾ ಡೇರಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಬೈರಮ್ಮ, ನಿರ್ದೇಶಕರಾದ ನಂಜಮ್ಮ, ಮುನಿಯಮ್ಮ, ರೇಣುಕಮ್ಮ, ಕೋಮಲಾ, ಸಿದ್ದಗಂಗಮ್ಮ, ಜಯಮ್ಮ, ಬಸವನಗರ ಸಂಘದ ಅಧ್ಯಕ್ಷ ಎನ್. ಗಂಗರಾಜು, ಕಾರ್ಯದರ್ಶಿ ಬಿ.ಎಂ. ರವಿಕುಮಾರ್ ಮತ್ತಿತರರು ಇದ್ದರು.