

ಕಡೂರು: ರೈತರು ಗುಣಮಟ್ಟದ ಹಾಲು ಉತ್ಪಾದಿಸಬೇಕು ಎಂದು ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಪಿ.ಎ.ರನ್ನಕುಮಾರ್ ತಿಳಿಸಿದರು.
ಕಲ್ಲಾಪುರ ಗ್ರಾಮದಲ್ಲಿ ಬುಧವಾರ ಕೆಎಂಎಫ್‌ನಿಂದ ಕ್ಷೀರ ಸಂಜೀವಿನಿ ಹಂತ-3ರ ಯೋಜನೆಯಡಿ ಪಶು ಆರೋಗ್ಯ ಅರಿವು ಕಾರ್ಯಗಾರದಲ್ಲಿ ಮಾತನಾಡಿ, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಹೈನುಗಾರಿಕೆ ಕ್ಷೇತ್ರದಲ್ಲಿ ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ರೈತರು ಸೂಕ್ತ ದರ ಪಡೆದುಕೊಳ್ಳಬೇಕಿದೆ. ಬೇಸಿಗೆಯಲ್ಲಿ ಹಸುಗಳಿಗೆ ಡೇರಿ ಅಧಿಕಾರಿಗಳು ಸೂಚಿಸಿದ ಆಹಾರವನ್ನು ಕ್ರಮಬದ್ಧವಾಗಿ ನೀಡಿ ಹೆಚ್ಚು ಹಾಲು ಉತ್ಪಾದಿಸಬೇಕು ಎಂದು ತಿಳಿಸಿದರು.
ಹಸುಗಳ ಆರೋಗ್ಯಕ್ಕೆ ಹೆಚ್ಚು ಗಮನಹರಿಸಬೇಕು. ಕೆಎಂಎಫ್‌ನಿಂದ ಹೈನುಗಾರಿಕೆ ಕ್ಷೇತ್ರದ ಬಗ್ಗೆ ಅರಿವು ಮೂಡಿಸಲು ಡೇರಿ ಹಂತದ ಸಂಘಗಳಲ್ಲಿ ಕಾರ್ಯಾಗಾರ ಮೂಲಕ ಎಲ್ಲ ರೀತಿಯ ಮಾಹಿತಿ ನೀಡಲಾಗುತ್ತಿದೆ ಎಂದರು.
ಕಲ್ಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ವಸಂತಕುಮಾರಿ, ಬಿಳುವಾಲ ಗ್ರಾಮದ ಪಶುವೈದ್ಯಾಧಿಕಾರಿ ಡಾ. ಸುರೇಶ್ ಅವರು ಹಸುಗಳ ಆರೋಗ್ಯ ಮತ್ತು ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವ ಮಾಹಿತಿ ನೀಡಿದರು.
ಸಹಕಾರ ಯೂನಿಯನ್ ಸಿಇಒ ಯಶಸ್, ಅಕ್ಕನಾಗಮ್ಮ, ಕೆಎಂಎಫ್ ವಿಸ್ತರಣಾಧಿಕಾರಿ ಭರತ್‌ಕುಮಾರ್, ಡಾ. ಮಂಜುನಾಥ್, ಸುಧಾಮಣಿ ದೊರೆಸ್ವಾಮಿ, ರಮೇಶ್‌ನಾಯ್ಕ, ಮುಗುಳಿಕಟ್ಟೆ ಲೋಕೇಶ್, ದೊರೆಸ್ವಾಮಿ ಹಾಗೂ ಸಂಘದ ಮಹಿಳಾ ಸದಸ್ಯೆಯರು ಇದ್ದರು.