ಗುಣಮಟ್ಟದ ಶಿಕ್ಷಣದಿಂದ ಮಕ್ಕಳು ವಂಚಿತರಾಗದಿರಲಿ

15ark-1
Published on

ಅರಕಲಗೂಡು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗದಂತೆ ಪಾಲಕರು ಜಾಗೃತಿ ವಹಿಸಬೇಕಿದೆ ಎಂದು ಉಳ್ಳೇನಹಳ್ಳಿ ನಳಂದ ವಿದ್ಯಾಸಂಸ್ಥೆ ಅಧ್ಯಕ್ಷ ಇಮ್ರಾನ್ ಕಲೀಲ್ ಕಿವಿಮಾತು ಹೇಳಿದರು.


ತಾಲೂಕು ಕೊಣನೂರಿನ ಉಳ್ಳೇನಹಳ್ಳಿ ನಳಂದ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ 19ನೇ ವರ್ಷದ ನಳಂದೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಆಧುನಿಕ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಆದರೆ ಬಡ ವರ್ಗದ ಮಕ್ಕಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗುತ್ತಿದೆ. ಉಳ್ಳವರಿಗೆ ಸಿಗುತ್ತಿರುವ ಉನ್ನತ ಶಿಕ್ಷಣವು ಹಳ್ಳಿಗಾಡಿನ ಮಕ್ಕಳಿಗೂ ದೊರೆಯುವಂತಾದರೆ ಮಾತ್ರ ಉನ್ನತಿ ಕಾಣಲು ಸಾಧ್ಯ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂಸ್ಥೆ ಮಂಚೂಣಿಯಲ್ಲಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.


ಪ್ರಾಂಶುಪಾಲರಾದ ಶೋಬಿಯಾ ಸಮ್ರೀನ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಪವಿತ್ರಾ, ಸಹಶಿಕ್ಷಕರಾದ ಸಖಿನಾ, ಭವ್ಯ, ದಿವ್ಯ, ಆಶಾ, ಅಮೀನ, ನವೀನ್, ಪ್ರಸಾದ್ ಇದ್ದರು.


ನಳಂದೋತ್ಸವ ಅಂಗವಾಗಿ ಮಕ್ಕಳಿಗೆ ನೃತ್ಯ, ಕರಾಟೆ, ನಾಟಕ ಪ್ರದರ್ಶನ ಹಾಗೂ ಪಾಲಕರಿಗೆ ಕಬಡ್ಡಿ, ಓಟ ಸ್ಪರ್ಧೆ, ರಂಗೋಲಿ, ಹಗ್ಗಜಗ್ಗಾಟ ಸೇರಿದಂತೆ ಇನ್ನಿತರ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net