

ಚಾಮರಾಜನಗರ: ಸರ್ಕಾರಿ ಶಾಲೆಯ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಬೋಧಕೇತರ ಸಿಬ್ಬಂದಿಗಳ ಪಾತ್ರವೂ ಮುಖ್ಯವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಾದೇವಿ ಸಲಹೆ ನೀಡಿದರು.
ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ನಲ್ಲಿ ಬೋಧಕೇತರ ಅಧಿಕಾರಿಗಳ ಸಿಬ್ಬಂದಿಗಳ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಇಲಾಖೆಯ ಉತ್ತಮ ಕೆಲಸಗಳಲ್ಲಿ ಬೋಧಕೇತರ ಅಧಿಕಾರಿಗಳ ಪಾತ್ರವೂ ಪ್ರಧಾನವಾಗಿರುತ್ತದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಶಿಕ್ಷಕರ ಜತೆಗೆ ಬೋಧಕೇತರ ಅಧಿಕಾರಿಗಳ ಸಹಕಾರವೂ ಅಗತ್ಯವಾಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಉತ್ತಮ ಕೆಲಸ ಮಾಡಿ ಶಿಕ್ಷಣ ಇಲಾಖೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರ ರಾಜೇಅರಸ್ ಮಾತನಾಡಿ, ನೌಕರರು ತಮ್ಮ ಪ್ರಾಮಾಣಿಕ ಸೇವೆಯನ್ನು ಸಕಾಲದಲ್ಲಿ ತಲುಪಿಸಲು ಮುಂದಾಗಬೇಕು. ಬೇರೆಯವರು ಮಾತನಾಡಿಕೊಳ್ಳುವಂತೆ ನಮ್ಮ ಇಲಾಖೆ ಮಾದರಿಯಾಗಬೇಕು. ಎಲ್ಲಾ ಇಲಾಖೆಗಳಲ್ಲೂ ಸಂಘಗಳು ರಚನೆಯಾಗಿವೆ, ಸಂಘಗಳ ರಚನೆಯ ಉದ್ದೇಶವೇನೆಂದರೆ ಕರ್ತವ್ಯದಲ್ಲಿರುವಾಗ ಅಡಚಣೆಯಾದಾಗ ಸಂಘದ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಎಲ್ಲರೂ ಸಂಘಟಿತರಾಗಿ ಉತ್ತಮ ಕೆಲಸ ನಿರ್ವಹಿಸಿ ನಮ್ಮ ಜಿಲ್ಲೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರು ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಬೋಧಕೇತರ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ಎಂ.ಕಾಶಿನಾಥ್, ಹಿರಿಯ ಸಹಾಯಕ ನಿರ್ದೇಶಕ ಶಶಿಧರನ್, ಉಪ ನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕ ಲಕ್ಷ್ಮಿಕಾಂತ, ಜಮುನಾ, ಆರ್.ರಾಣಿ, ಶಾಲಾ ಶಿಕ್ಷಣ ಇಲಾಖೆಯ ಮಲ್ಲಿಕಾರ್ಜುನ, ಬಿ.ಎನ್.ನಾಗೇಂದ್ರ, ಶಶಿಕುಮಾರ್, ಚಂದ್ರಪ್ರಭ, ಗಿರೀಶ್, ಅನ್ನಪೂರ್ಣ, ಕುಮಾರಸ್ವಾಮಿ, ರಾಮನಾಥ, ಮಹದೇವಸ್ವಾಮಿ, ಜಗದಾಂಬ, ಸೌಭಾಗ್ಯಮ್ಮ ಹಾಗೂ ಇತರರು ಹಾಜರಿದ್ದರು.