ಗುಣಮಟ್ಟದ ಶಿಕ್ಷಣಕ್ಕೆ ವಸತಿ ಶಾಲೆಗಳ ಸ್ಥಾಪನೆಗೆ ಆದ್ಯತೆ

11ark1
ಅರಕಲಗೂಡು ತಾಲೂಕಿನ ತಾಲೂಕಿನ ಚೌರಗಲ್ ಗ್ರಾಮದಲ್ಲಿ ಶನಿವಾರ 23.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಉದ್ಘಾಟಿಸಿದರು. ಎ.ಟಿ. ರಾಮಸ್ವಾಮಿ, ಎಂ.ಆರ್. ರಂಗಸ್ವಾಮಿ, ನಾಗರಾಜು ಇತರರಿದ್ದರು.
Published on

ಅರಕಲಗೂಡು: ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಭವಿಷ್ಯದಲ್ಲಿ ಯಾವುದೇ ಅನನುಕೂಲ ಉಂಟಾಗದಂತೆ ಎಚ್ಚೆತ್ತು ಸರ್ಕಾರ ವಸತಿ ಶಾಲೆಗಳ ಸ್ಥಾಪನೆಗೆ ಆದ್ಯತೆ ನೀಡಿ ಶೈಕ್ಷಣಿಕವಾಗಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.

ತಾಲೂಕಿನ ಚೌರಗಲ್ ಗ್ರಾಮದಲ್ಲಿ ಶನಿವಾರ 23.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟಿಸಿ ಮಾತನಾಡಿ, ಕಡು ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರ ಅನೇಕ ವಸತಿ ಶಾಲೆಗಳಿಗೆ ಕೋಟಿಗಟ್ಟಲೆ ಹಣ ನೀಡಿ ಸ್ಥಾಪಿಸಿದೆ. ಇದರಿಂದ ಮುಂದೆ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಗಳು ಉದ್ಭವಿಸುವುದಿಲ್ಲ. ವಸತಿ ಶಾಲೆಗಳು ಯಾರ ಅವಧಿಯಲ್ಲಿ ಕಟ್ಟಲ್ಪಟ್ಟಿವೆ ಎಂಬುದು ನೆನಪಿನಲ್ಲಿ ಉಳಿಯಲಿವೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು ಎಂದು ಸಲಹೆ ನೀಡಿದರು.

ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಕ್ಷೇತ್ರಗಳಿಗೆ ಅನುದಾನ ವಿತರಣೆಯಲ್ಲಿ ಕಿಂಚಿತ್ತೂ ತಾರತಮ್ಯ ಮಾಡಿಲ್ಲ. ಎಲ್ಲ ತಾಲೂಕುಗಳಿಗೆ ಅಪಾರ ಅನುದಾನ ವ್ಯಯಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮಳೆ ಹಾನಿ ಪರಿಹಾರವನ್ನು ಸಮರ್ಪಕವಾಗಿ ವಿತರಿಸಿ ರೈತರಿಗೆ ನೆರವಾಗಿದೆ. ಕರೊನಾ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಿ ಮತ್ತೆ ಕಾಯಿಲೆ ಉಲ್ಭಣಿಸಿದಾಗ ಸಮಸ್ಯೆ ಆಗದಂತೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಹೇಳಿದರು.

ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಚೌರಗಲ್ ವಸತಿ ಶಾಲೆಯನ್ನು ದೂರದೃಷ್ಟಿ ಇಟ್ಟುಕೊಂಡು ವಿಶಾಲವಾದ ಜಾಗದಲ್ಲಿ ಸ್ಥಾಪಿಸಲಾಗಿದೆ. ಗುಡ್ಡೇನಹಳ್ಳಿ, ದೊಡ್ಡಮಗ್ಗೆ, ಹೊನ್ನವಳ್ಳಿ, ಹೊನ್ನೇನಹಳ್ಳಿ ಗ್ರಾಮದ ಬಳಿ ತಲಾ 25 ಕೋಟಿ ರೂ.ವೆಚ್ಚದಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಬರಗೂರು, ಕಬ್ಬಳಿಗೆರೆ ವಸತಿ ಶಾಲೆಗಳಿಗೆ ತಲಾ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಪರಿಪೂರ್ಣತೆಯ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಚಂದ್ರೇಗೌಡ, ಯೋಗೇಶ್, ಸುಮಿತ್ರಮ್ಮ, ಯಶೋದಮ್ಮ, ತಹಸೀಲ್ದಾರ್ ಮೋಹನಕುಮಾರ್, ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್, ತಾಪಂ ಇಒ ಗಿರಿಧರ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್, ಹಾಸನ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಚ್.ವಿ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮನುಕುಮಾರ್, ಬಿಇಒ ದೇವರಾಜು, ವಸತಿ ಶಾಲೆ ಪ್ರಾಂಶುಪಾಲೆ ಎನ್.ಎಚ್.ಶ್ರುತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net