

ಚಿತ್ರದುರ್ಗ: ಗುಣಮಟ್ಟದ ವಿದ್ಯುತ್ ಪೂರೈಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ನಗರದ ಬೆಸ್ಕಾಂ ಹೊಸ ಕಾಲನಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಾರ‌್ಯ ಮತ್ತು ಪಾಲನಾ ಘಟಕ 3 ಹಾಗೂ ಘಟಕ-4 ರ ಕಚೇರಿಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಧನ ಇಲಾಖೆಗೆ ಅತಿ ಹೆಚ್ಚಿನ ಅನುದಾನ ಒದಗಿಸಿ ದ್ದಾರೆ. ಗೃಹಜ್ಯೋತಿ ಜತೆಗೆ ಕೃಷಿಗಾಗಿ 19 ಸಾವಿರ ಕೋಟಿ ರೂ.ವಿದ್ಯುತ್ ಸಬ್ಸಿಡಿಕೊಡಲಾಗಿದೆ. ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಪರಿವರ್ತಕಗಳ ಬದಲಾವಣೆ,ಉಪಕೇಂದ್ರಗಳ ಹೆಚ್ಚಳ,ವಿವಿಧ ವಿದ್ಯುತ್ ಮಾರ್ಗಗಳ ಸುಧಾರಣೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು,ಇಂಧನ ಇಲಾಖೆ ಬಲಪಡಿಸಲಾಗುತ್ತಿದೆ ಎಂದರು.
ಜಿಲ್ಲೆಯ 4,19,7722 ಗೃಹಪಯೋಗಿ ಗ್ರಾಹಕರ ಪೈಕಿ 3,75,160 ಗ್ರಾಹಕರು ಗೃಹಜ್ಯೋತಿ ಯೋಜನೆ ಫಲಾನುಭವಿಗಳಾಗಿದ್ದು, ಇದರ ಸಹಾಯಧನ ಮೊತ್ತ ಈವರೆಗೆ 29275.39 ಲಕ್ಷ ರೂ.ಬಿಡುಗಡೆಯಾಗಿದೆ ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ,ಗೃಹಜ್ಯೋತಿ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲು ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕೆಂದರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ,50 ಲಕ್ಷ ರೂ.ವೆಚ್ಚದಲ್ಲಿ ಬೆಸ್ಕಾಂ ಕಾರ್ಯ ಮತ್ತು ಪಾಲನಾ ಘಟಕಗಳ ಕಚೇರಿಗಳನ್ನು ನಿರ್ಮಿಸಲಾಗಿದೆ. ಇವುಗಳಿಂದ 17ಕ್ಕೂ ಅಧಿಕ ಗ್ರಾಪಂ ಜನರಿಗೆ ಸೇವೆ ದೊರೆಯಲಿದೆ ಎಂದರು.
ಬೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ಮಾತನಾಡಿ,ಚಿತ್ರದುರ್ಗ ಬೆಸ್ಕಾಂ ಹೊಸ ಕಾಲನಿಯಲ್ಲಿ 7.60 ಕೋಟಿ ರೂ.ವೆಚ್ಚದಲ್ಲಿ ಲೈನ್‌ಮ್ಯಾನ್‌ಗಳ ಹಾಗೂ 1.53 ಕೋಟಿ ರೂ.ವೆಚ್ಚದಲ್ಲಿ ಅಧಿಕಾರಿಗಳ ವಸತಿಗಳ ನಿರ್ಮಾಣ ಕಾಮಗಾರಿ ಕಾಮಗಾರಿ ಪ್ರಗತಿಯಲ್ಲಿದೆ. ಚಿತ್ರದುರ್ಗ ನಗರ ಮತ್ತು ಗ್ರಾಮೀಣ ಉಪವಿಭಾಗಗಳ ವ್ಯಾಪ್ತಿ 2.14 ಲಕ್ಷಕ್ಕೂ ಹೆಚ್ಚು ವಿದ್ಯುತ್ ಗ್ರಾಹಕರಿದ್ದಾರೆ.ಜಿಲ್ಲೆಯಲ್ಲಿ 3.15 ಲಕ್ಷಕ್ಕೂ ಹೆಚ್ಚು ನೀರಾವರಿ ಪಂಪ್‌ಸೆಟ್ ಹೊಂದಿದ ಗ್ರಾಹಕರಿದ್ದು, ಚಿತ್ರದುರ್ಗ ತಾಲೂಕಿನಲ್ಲಿ 35,148 ಐಪಿ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಆರ್.ಶಿವಣ್ಣ,ಉಪಾಧ್ಯಕ್ಷರಾದ ಡಿ.ಎನ್.ಮೈಲಾರಪ್ಪ, ಖಾದಿ ರಮೇಶ್, ಬೆಸ್ಕಾಂ ಅಧಿಕಾರಿಗಳು ಇದ್ದರು.