

ಚಿತ್ರದುರ್ಗ: ತುರುವನೂರು ಹೋಬಳಿ ಕೇಂದ್ರದಲ್ಲಿ ನಡೆಯುತ್ತಿರುವ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಸವಾರರು ಸಂಚರಿಸುವಾಗ ಸುಂದರವಾಗಿಯೂ ಕಾಣುವಂತೆ ನಿರ್ಮಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ತುರುವನೂರು ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ, ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು.
ಈ ಹೋಬಳಿ ಕೇಂದ್ರ ದಿನೇ ದಿನೆ ಬೆಳೆಯುತ್ತಿದೆ. ಜನಸಂಖ್ಯೆ, ವ್ಯಾಪಾರ, ವಹಿವಾಟು ಕೂಡ ಹೆಚ್ಚುತ್ತಿದ್ದು, ರಸ್ತೆ ವಿಸ್ತರಣೆ ಅಗತ್ಯವಿದೆ. ಇದರಿಂದ ನಾಗರಿಕರಿಗೆ ಅನುಕೂಲವಾಗಲಿದೆ ಎಂದರು.
ರಸ್ತೆ ವಿಸ್ತರಣೆ ವೇಳೆ ಚರಂಡಿ, ಪಾದಚರಿ ಮಾರ್ಗ ನಿರ್ಮಾಣ, ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಇದರಿಂದ ಹೊಸ ರೂಪ ಪಡೆಯಲಿದೆ. ಕಳಪೆ ಕಾಮಗಾರಿ ನಡೆದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಯಾವುದೇ ರಾಜೀ ಪ್ರಶ್ನೆಯೇ ಇಲ್ಲ. ಸ್ಥಳೀಯರು ಆಗಿಂದಾಗ್ಗೆ ಗುಣಮಟ್ಟ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಿ, ಉತ್ತಮ ನಿರ್ವಹಣೆಗೆ ಮುಂದಾಗಬೇಕು. ಇ-ಸ್ವತ್ತು ನಿಗದಿತ ಅವಧಿಯೊಳಗೆ ನೀಡಬೇಕು. ಜನರನ್ನು ಅಲೆದಾಡಿಸಬೇಡಿ ಎಂದು ತಾಕೀತು ಮಾಡಿದರು.
ತಹಸೀಲ್ದಾರ್ ನಾಗವೇಣಿ, ಪಿಡಿಒ ಖಲೀಂ, ವಿವಿಧ ಇಲಾಖೆ ಇಂಜಿನಿಯರ್‌ಗಳಾದ ಮಲ್ಲಿಕಾರ್ಜುನ್, ಅಣ್ಣಪ್ಪ, ಬಸವನಗೌಡ, ಪಾತಪ್ಪ, ಮಂಜುನಾಥ್ ಇತರರಿದ್ದರು.