ಗುಣಮಟ್ಟದ ರಸ್ತೆ ಗ್ರಾಮೀಣಾಭಿವೃದ್ಧಿಗೆ ಸಹಕಾರಿ

00000000
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗುಣಮಟ್ಟದ ರಸ್ತೆಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಶಾಸಕ ಎನ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತಾಲೂಕಿನ ಟಿ.ಬೇಗೂರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ಅನುದಾನದಲ್ಲಿ ವಿವಿಧ ಗ್ರಾಮದ ಸಂಪರ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಕೆಲ ಗ್ರಾಮಸ್ಥರ ಮನವಿಯಂತೆ ಸುಮಾರು ವರ್ಷಗಳಿಂದಲೂ ಹದಗೆಟ್ಟಿದ್ದ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಸಹಕಾರ ನೀಡಿದಾಗ ಮಾತ್ರ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಮೀಸಲು ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳಿಂದ ಎಸ್‌ಸಿಎಸ್‌ಟಿ ಸಮುದಾಯದ ಕುಟುಂಬಗಳು ವಾಸ ಮಾಡುತ್ತಿದ್ದು, ಆ ಗ್ರಾಮಗಳು ಅಭಿವೃದ್ಧಿ ಕಾಣದೆ ಇರುವುದು ನೋವಿನ ಸಂಗತಿ. ಎಸ್‌ಸಿಎಸ್‌ಟಿ ಜತೆಗೆ ಎಲ್ಲ ಸಮುದಾಯಗಳು ವಾಸ ಮಾಡುವ ಗ್ರಾಮದಲ್ಲಿ ಜಾತ್ಯಾತೀತವಾಗಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಜನರು ಜನಪ್ರತಿನಿಧಿಗಳ ಜತೆ ಸಂಪರ್ಕವಿರಿಸಿಕೊಂಡು, ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಳ್ಳಲು ಮುಂದಾಗಬೇಕಿದೆ. ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದರು.


ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜು ಮಾತನಾಡಿ, ಕ್ಷೇತ್ರ ಅಭಿವೃದ್ಧಿ ಕಾರ್ಯಗಳಿಗೆ ನಿರಂತರವಾಗಿ ಶ್ರಮಿಸುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯವಾದದ್ದು. 3-4 ದಶಕಗಳಿಂದ ಅಭಿವೃದ್ಧಿ ಕಾಣದ ಸಾಕಷ್ಟು ರಸ್ತೆಗಳು, ಶಾಸಕರು ಅಧಿಕಾರಕ್ಕೆ ಬಂದು ಕೇವಲ ಒಂದುವರೆ ವರ್ಷದಲ್ಲೇ ಅಭಿವೃದ್ಧಿಯಾಗುತ್ತಿರುವುದು ಸಂತೋಷಕರ ಸಂಗತಿ. ಟಿ.ಬೇಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಟಿ.ಬೆಗೂರು ಗ್ರಾ.ಪಂ. ಅಧ್ಯಕ್ಷೆ ಮಮತಾ, ಸದಸ್ಯ ಜಗದೀಶ್, ಮಂಜುನಾಥ್, ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಮುಖಂಡ ಕಿರಣ್ ಕುಮಾರ್, ರಂಗನಾಥ್, ಮಂಜುನಾಥ್ ಮತ್ತಿತರರು ಇದ್ದರು.


ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ:
ತಾಲೂಕಿನ ಟಿ.ಬೇಗೂರು ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ 50 ಲಕ್ಷ ರೂ. ಹಾಗೂ ಗ್ರಾಪಂ ವ್ಯಾಪ್ತಿಯ ತೊರೆಕೆಂಪಹಳ್ಳಿ ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ 50 ಲಕ್ಷ ರೂ.ವೆಚ್ಚ ಒಟ್ಟಾರೆ 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net