ಗುಣಮಟ್ಟದ ಮನೆ ನಿರ್ಮಾಣವಾಗಲಿ

Published on

ಚಾಮರಾಜನಗರ ; ರಾಜ್ಯ ಸರ್ಕಾರ ಆದಿವಾಸಿ ಸಮುದಾಯದ ವಸತಿರಹಿತರಿಗೆ ಮನೆ ನಿರ್ಮಾಣ ಮಾಡಿಕೊಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು, ಗುಣಮಟ್ಟದ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಸೋಲಿಗ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಜಿಲ್ಲೆಯ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ 3586, ಗುಂಡ್ಲುಪೇಟೆ 1385, ಚಾಮರಾಜನಗರ 1403, ಯಳಂದೂರು 709 ಹಾಗೂ ಕೊಳ್ಳೇಗಾಲ ತಾಲೂಕಿನಲ್ಲಿ 379 ಆದಿವಾಸಿ ಕುಟುಂಬಗಳು ವಾಸವಾಗಿದ್ದಾರೆ. ಅದರಲ್ಲಿ ಬಹುಪಾಲು ಕುಟುಂಬಗಳಿಗೆ ಸೂಕ್ತ ವಸತಿ ಸೌಲಭ್ಯವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದರು. ಮುರಿದು ಬೀಳುವ ಜೋಪಡಿ ಮತ್ತು ಮನೆಗಳಲ್ಲಿ ವಾಸಿವಾಗಿದ್ದ ಆದಿವಾಸಿಗಳು, ಮನೆ ನಿರ್ಮಾಣ ಮಾಡಿಕೊಡುವಂತೆ ನಿರಂತರ ಒತ್ತಾಯ ಮಾಡುತ್ತಿದ್ದರು. ಇದನ್ನು ಮನಗಂಡಿದ್ದ ಜಿಲ್ಲಾಡಳಿತ 2 ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಆದಿವಾಸಿಗಳ ಮನೆ ಮನೆ ಸಮೀಕ್ಷೆ ನಡೆಸಿ ಸುಮಾರು 2995 ಕುಟುಂಬಗಳಿಗೆ ಮನೆಗಳನ್ನು ಕಟ್ಟುಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ ಜಾರಿಗೊಳಿಸಿದೆ. ಅದರಂತೆ ಜಿಲ್ಲೆಯಲ್ಲಿ ಎರಡು ಸಾವಿರಕ್ಕಿಂತಲೂ ಅಧಿಕ ಮನೆಗಳನ್ನು ಸೂರಿಲ್ಲದ ಆದಿವಾಸಿಗಳಿಗೆ ನಿರ್ಮಾಣ ಮಾಡಲು ಮುಂದಾಗಿದೆ. ಆದಷ್ಟು ಬೇಗ ಯೋಜನೆ ಜಾರಿಯಾಗಬೇಕು, ಅರ್ಹ ಲಾನುಭವಿಗಳನ್ನು ಆಯ್ಕೆ ಮಾಡಬೇಕು, ಗುಣಮಟ್ಟದ ಮನೆ ನಿರ್ಮಾಣ ಮಾಡಿಕೊಡಬೇಕು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮನೆಗಳ ನಿರ್ಮಾಣ ಜವಾಬ್ದಾರಿ ವಹಿಸಬೇಕು ಎಂದು ಸೋಲಿಗ ಸಮುದಾಯದ ಮುಖಂಡರು ಹಾಗೂ ಆದಿವಾಸಿಗಳು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರಿಂದ ಅಭಿಪ್ರಾಯಗಳನ್ನು ಸಂಂಗ್ರಹಿಸಲಾಗಿದೆ.

*ಯೋಜನೆ ಬೇಗ ಜಾರಿಯಾಗಲಿ

ಸೋಲಿಗಾರ ಪೋಡುಗಳಲ್ಲಿ ಮನೆ ನಿರ್ಮಾಣ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದು, ಅದಷ್ಟು ಬೇಗ ಯೋಜನೆಯು ಜಾರಿಯಾಗಬೇಕು. ಜಿಲ್ಲೆಯಲ್ಲಿ ಹೆಚ್ಚು ಸೋಲಿಗ ಸಮುದಾಯದವರು ವಾಸಿಸುತ್ತಿದ್ದು, ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಮನೆಗಳು ಶಿಥಿಲಾವಸ್ಥೆ ತಲುಪಿದೆ. ಗ್ರಾಪಂ ಮೂಲಕ ದೊರೆಯುತ್ತಿರುವ ಮನೆಗಳ ಸಂಖ್ಯೆಯು ಬಹಳಷ್ಟು ಕಡಿಮೆಯಾಗಿದೆ. ಈ ಬಾರಿಯ ಸಚಿವ ಸಂಪುಟದಲ್ಲಿ 2 ಸಾವಿರ ಮನೆಗಳನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಿರುವುದು ಮೆಚ್ಚುಗೆ ವಿಚಾರವಾಗಿದೆ. ಇನ್ನೂ ಹೆಚ್ಚಿನ ಮನೆಗಳನ್ನು ನೀಡಬೇಕಾಗಿತ್ತು. ಅರ್ಹ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಬೇಕು.

ರಂಗಮ್ಮ ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷೆ, ಬಿಳಿಗಿರಿರಂಗನಬೆಟ್ಟ, ಯಳಂದೂರು

ಅರ್ಹ ಲಾನುಭವಿಗಳ ಆಯ್ಕೆ

ಯಳಂದೂರು ತಾಲೂಕಿನಲ್ಲಿ ಬುಡಕಟ್ಟು ಸಮುದಾಯದವರು 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯು ಸೋಲಿಗರ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ, ಆದಷ್ಟು ಬೇಗ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು. ಜತೆಗೆ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮತ್ತಷ್ಟು ಗಮನಹರಿಸಬೇಕಾಗಿದೆ.

ಬಸವರಾಜು, ಕಾರ್ಯದರ್ಶಿ, ಸೋಲಿಗ ಅಭಿವೃದ್ಧಿ ಸಂಘ, ಯಳಂದೂರು

ಇಲಾಖೆಗೆ ಜವಾಬ್ದಾರಿ ವಹಿಸಿ

ಹನೂರು ಭಾಗದ ಸೋಲಿಗರ ಹಾಡಿಗಳಲ್ಲಿ 1,280 ಮನೆಗಳ ಅಗತ್ಯತೆ ಇದ್ದು, ಈ ಸಂಬಂಧ ಹಲವು ವರ್ಷಗಳಿಂದಲೂ ಹೋರಾಟ ನಡೆಸಲಾಗುತ್ತಿದೆ. ಇತ್ತೀಚಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು 90 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಇದೀಗ ಆದಿವಾಸಿಗಳಿಗೆ ಮನೆ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದು ಸಂತಸದ ವಿಚಾರ. ಆದರೆ ಗುಡಿಸಲು, ಜೋಪಡಿ ಹಾಗೂ ಕೊಟ್ಟಿಗೆಗಳಲ್ಲಿ ವಾಸಿಸುತ್ತಿರುವವರಿಗೆ ಮೊದಲ ಆದ್ಯತೆ ನೀಡಬೇಕು. ಮನೆ ನಿರ್ಮಿಸುವ ಜವಾಬ್ದಾರಿಯನ್ನು ಯಾವುದೇ ಸಂಸ್ಥೆಗೆ ನೀಡದೆ, ಗುಣಮಟ್ಟದ ಉದ್ದೇಶದಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ವಹಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಅವರು ಗಮನಹರಿಸಬೇಕು.

ವಿ.ಮುತ್ತಯ್ಯ, ಸಂಯೋಜಕ, ಕರ್ನಾಟಕ ರಾಜ್ಯ ಆದಿವಾಸಿ ಬುಡಕಟ್ಟು ಒಕ್ಕೂಟ

ಸೂರಿಲ್ಲದವರಿಗೆ ಆದ್ಯತೆ ಸಿಗಲಿ

ಹನೂರು ಭಾಗದಲ್ಲಿ ಬಹುತೇಕ ಸೋಲಿಗ ಕುಟುಂಬಗಳು ಗುಡಿಸಲಿನಲ್ಲಿ ಹೀನಾಯ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಮಳೆಗಾಲದ ವೇಳೆ ಪಡಬಾರದ ಕಷ್ಟ ಪಡುತ್ತಿದ್ದಾರೆ. ಮನೆ ಅಗತ್ಯತೆ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದೀಗ ಸಚಿವ ಸಂಪುಟ ಸಭೆಯಲ್ಲಿ ಮನೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವುದು ಕೊಂಚ ಸಮಾಧಾನ ತಂದಿದೆ. ಈಗಾಗಲೇ ಸೂರಿಲ್ಲದೆ ತೊಂದರೆ ಅನುಭವಿಸುತ್ತಿರುವ ಸೋಲಿಗರಿಗೆ ಆದಷ್ಟು ಬೇಗ ಮನೆ ನಿರ್ಮಿಸಿ ಕೊಡಬೇಕು. ಇದರ ಜವಾಬ್ದಾರಿಯನ್ನು ಇಲಾಖೆಯ ವಹಿಸಿಕೊಳ್ಳಬೇಕು.

ನಾಗೇಂದ್ರ, ಅಧ್ಯಕ್ಷ, ಆದಿವಾಸಿ ಹಿತರಕ್ಷಣಾ ಸಮಿತಿ, ಹನೂರು

ಮನೆಗಳು ಶಿಥಿಲಗೊಂಡಿವೆ

ಸರ್ಕಾರ ಆದಿವಾಸಿಗಳಿಗೆ 2 ಸಾವಿರಕ್ಕೂ ಅಧಿಕ ಮನೆಗಳ ನಿರ್ಮಾಣ ಮಾಡಿಕೊಡಲು ತೀರ್ಮಾನ ಮಾಡಿರುವುದು ಒಳ್ಳೆಯ ಕೆಲಸವಾಗಿದೆ. ಕೊಳ್ಳೇಗಾಲ ಕ್ಷೇತ್ರದ ಕಟ್ಟ ಕಡೆಯ ಗ್ರಾಮ ಮೊಳೆಕಟ್ಟೆಯಲ್ಲಿ 20ಕ್ಕೂ ಹೆಚ್ಚು ಮನೆಗಳು ಶಿಥಿಲಾವಸ್ಥೆಯಲ್ಲಿದ್ದು, ವಯಸ್ಸಾದವರು ಮತ್ತು ಮಕ್ಕಳು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಮಗೆ ಹೊಸ ಮನೆಗಳನ್ನು ಕಟ್ಟಿಸಿಕೊಟ್ಟರೆ ಬಹಳ ಅನುಕೂಲವಾಗಲಿದೆ.

ಈರೇಗೌಡ, ಮೊಳೆಕಟ್ಟೆ, ಕೊಳ್ಳೇಗಾಲ

ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿ

ತಿಮ್ಮರಾಜಿಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಎರೆಕಟ್ಟೆ, ಮೊಳೆಕಟ್ಟೆ, ಕರುಳಕಟ್ಟೆ ಎಂಬ ಮೂರು ಹಾಡಿಗಳಿದ್ದು. ಈ ಮೂರು ಹಾಡಿಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳು ಶಿಥಿಲಾವಸ್ಥೆಯಲ್ಲಿದೆ. ಬಿರುಕು ಬಿಟ್ಟಿರುವ ಹಾಗೂ ಕುಸಿದು ಬೀಳುವ ಮನೆಗಳಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮನೆ ಕಟ್ಟಿ ಕೊಡುವ ತೀರ್ಮಾನ ಮಾಡಿರುವುದು ಸಂತೋಷದ ವಿಚಾರ. ನಮ್ಮ ಪಂಚಾಯಿತಿಯ ಈ ಮೂರು ಹಾಡಿಗಳ ಜನರ ಮನೆಯ ಪರಿಸ್ಥಿತಿಯನ್ನು ಖುದ್ದು ವೀಕ್ಷಣೆ ಮಾಡಿ ಹೊಸ ಮನೆಗಳನ್ನು ಕಟ್ಟಿಕೊಟ್ಟರೆ ಬಹಳ ಅನುಕೂಲವಾಗಲಿದೆ.

ಲಕ್ಷ್ಮಿ, ಎರೆಕಟ್ಟೆ, ಗ್ರಾಪಂ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ

ಈ ತೀರ್ಮಾನ ಅಭಿನಂದನಾರ್ಹ

ತಾಲೂಕಿನಲ್ಲಿ ಕಾಡುಕುರುಬ, ಜೇನು ಕುರುಬ ಹಾಗೂ ಬುಡಕಟ್ಟು ಜನಾಂಗದವರ ಸ್ಥಿತಿ ಅತ್ಯಂತ ಹೀನಾಯವಾಗಿದೆ. ಪ್ರಧಾನಮಂತ್ರಿ ಯೋಜನೆಯಲ್ಲಿ ಜೇನುಕುರುಬ ಜನಾಂಗಕ್ಕೆ ಮನೆಗಳನ್ನು ನೀಡಲಾಗುತ್ತಿದ್ದರೂ, ಸೋಲಿಗ, ಕಾಡು ಹಾಗೂ ಬೆಟ್ಟಕುರುಬ ಜನಾಂಗದವರಿಗೆ ಯಾವುದೇ ಮನೆಗಳು ಮಂಜೂರಾಗಿರಲಿಲ್ಲ. ಸದ್ಯ ಮುಖ್ಯಮಂತ್ರಿಗಳು ತಮ್ಮ ಸಂಪುಟದ ಸಭೆಯಲ್ಲಿ ಹೊಸದಾಗಿ ಮನೆಕಟ್ಟಿಕೊಡಲು ಕೈಗೊಂಡ ತೀರ್ಮಾನ ಅಭಿನಂದನಾರ್ಹ. ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರ್ಹ ಫಲಾನುಭವಿಗಳಿಗೆ ಶೀಘ್ರವೇ ಮನೆ ನಿರ್ಮಿಸಿಕೊಡಬೇಕು.

ಡಾ.ರತ್ನಮ್ಮ, ಸೋಲಿಗ ಮುಖಂಡರು, ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net