

ಗದಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ಪೂರೈಸಲು ಕೃಷಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನರಗುಂದದ ಗೃಹ ಕಚೇರಿಯಿಂದ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಆಯೋಜಿಸಿದ್ದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು. ಲಾಕ್ಡೌನ್ ಸಮಯದಲ್ಲಿ ನಿಯಂತ್ರಿತ ಕೃಷಿ ಚಟುವಟಿಕೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಅದರಂತೆ ಜಿಲ್ಲೆಯಲ್ಲಿಯೂ ರೈತರಿಗೆ ಅನುಕೂಲವಾಗುವಂತೆ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣ ದೊರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ರೈತರಿಗೆ ಸುಲಭವಾಗಿ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ದೊರಕುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಗ್ರಾಮೀಣ ಭಾಗದಿಂದ ನಗರಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಆಗಮಿಸುವ ರೈತರು ಕರೊನಾ ಸೋಂಕಿನ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಅಂಗಡಿಗಳಲ್ಲಿ ಪರಸ್ಪರ ಅಂತರ ನಿಯಮ ಪಾಲನೆಯನ್ನ ಅಧಿಕಾರಿಗಳು ಪರಿಶೀಲಿಸಬೇಕು ಎಂದರು.
ತಾಲೂಕುವಾರು ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಕುರಿತು ತಾಲೂಕು ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊರತೆಯಾಗದಂತೆ ಮುಂಜಾಗ್ರತೆ ಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಅಗತ್ಯ ಕ್ರಮ ವಹಿಸಬೇಕು. ಸೂಕ್ತ ರೀತಿಯಲ್ಲಿ ವಿತರಣೆ ಮಾಡಬೇಕು. ಗೊಬ್ಬರ ವಿತರಣೆಯಲ್ಲಿ ನೂಕುನುಗ್ಗಲು ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ರಸಗೊಬ್ಬರಗಳಾದ ಡಿಎಪಿ ಪ್ರತಿ ಚೀಲಕ್ಕೆ 1200, ಕಾಂಪ್ಲೆಕ್ಸ್ 16-20-13 ಪ್ರತಿ ಚೀಲಕ್ಕೆ 1050, ಕಾಂಪ್ಲೆಕ್ಸ್ 15-15-15 ಪ್ರತಿ ಚೀಲಕ್ಕೆ 1150, ಯೂರಿಯಾ ಪ್ರತಿ ಚೀಲಕ್ಕೆ 266 ರೂ., ಗರಿಷ್ಠ ಮಾರಾಟ ಬೆಲೆ ನಿಗದಿಪಡಿಸಲಾಗಿದೆ ಎಂದರು.
2021ನೇ ಸಾಲಿನ ಮುಂಗಾರು ಬಿತ್ತನೆ ಬೀಜದ ಲಭ್ಯತೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರಲ್ಲದೇ, ಹೈಬ್ರೀಡ್ ಜೋಳ ವಿವಿಧ ತಾಲೂಕುಗಳು ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 75 ಕ್ವಿಂಟಾಲ್, ಮುಸುಕಿನ ಜೋಳ 3286 ಕ್ವಿಂ., ಸಜ್ಜೆ 190 ಕ್ವಿಂ., ಹೆಸರು 721 ಕ್ವಿಂ., ತೊಗರಿ 100 ಕ್ವಿಂ., ಶೇಂಗಾ 406 ಕ್ವಿಂ., ಸೂರ್ಯಕಾಂತಿ 171 ಕ್ವಿಂ., ಹೈಬ್ರೀಡ್ ಹತ್ತಿ 52072 (ಪ್ಯಾಕೆಟ್) ಜಿಲ್ಲೆಯಲ್ಲಿ ಸಂಗ್ರಹವಿದೆ. ಪ್ರಸಕ್ತ ಸಾಲಿನ ಮುಂಗಾರಿಗೆ ಅಗತ್ಯವಿರುವ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದರು.ಸಭೆಯಲ್ಲಿ ಜಿಲ್ಲಾಧಿಕಾರಿ ಸುಂದರೇಶ ಬಾಬು , ಜಿ.ಪಂ. ಸಿಇಒ ಭರತ್ ಎಸ್., ತೋಟಗಾರಿಕೆ ಹಿರಿಯ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.