ಗುಣಮಟ್ಟದ ಬಿತ್ತನೆ ಬೀಜ ವಿತರಿಸಲು ಸೂಚನೆ

10Rajesh6
Published on

ಚಾಮರಾಜನಗರ: ತಾಲೂಕಿನ ರೈತರಿಗೆ ಕಳೆದ ವರ್ಷ ನೀಡಿದ್ದ ಸೆಣಬಿನ ಬಿತ್ತನೆ ಬೀಜ ಮೊಳಕೆಯೊಡಲೆಯೇ ಇಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ವರ್ಷ ಉತ್ತಮ ಬಿತ್ತನೆ ನೀಡಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಬಸವಣ್ಣ ಮಾತನಾಡಿ, ಕಳೆದ ವರ್ಷ ಸೆಣಬು ಸರಿಯಾಗಿ ಮೊಳೆಕೆಯೊಡೆಯಲಿಲ್ಲ. ಈ ಸಲ ಉತ್ತಮ ಬಿತ್ತನೆ ನೀಡಬೇಕೆಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ತಾಲೂಕು ಸಹಾಯಕ ಕೃಷಿ ಅಧಿಕಾರಿ ರೂಪಾ ಅವರನ್ನು ಸೆಣಬಿನ ಬಿತ್ತನೆ ಬೀಜಗಳನ್ನು ಎಲ್ಲಿಂದ ತರಿಸುತ್ತಿದ್ದೀರ ಎಂದು ಪ್ರಶ್ನಿಸಿದರು. ಬಳ್ಳಾರಿ, ಕೊಪ್ಪಳದ ಕಡೆಯಿಂದ ಬರುತ್ತಿದೆ ಎಂಬ ಮಾಹಿತಿ ಪಡೆದ ಬಳಿಕ ಉತ್ತಮ ಬಿತ್ತನೆ ಬೀಜ ತರಿಸಬೇಕೆಂದು ನಿರ್ದೇಶನ ನೀಡಿದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೋಮೇಶ್ ಮಾತನಾಡಿ, ಎಸ್ಸಿ/ಎಸ್ಟಿ ರೈತರಿಗೆ ಕೃಷಿ ಉಪಕರಣಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆಯೆ ಎಂದು ಪ್ರಶ್ನಿಸಿದರು. ಅಧಿಕಾರಿ ರೂಪ ಮಾತನಾಡಿ, ಅಧಿಕ ಅರ್ಜಿಗಳು ಬಂದಿವೆ. ಆದರೆ ಭೌತಿಕ ಗುರಿ ಕಡಿಮೆ ಇದೆ ಎಂದು ಗಮನಕ್ಕೆ ತಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಆಲಂಬೂರು ಯೋಜನೆಯ ಮೂಲಕ ಸುವರ್ಣಾವತಿ ನಗರಕ್ಕೆ ನೀರು ತುಂಬಿಸುವ ಕಾರ್ಯವನ್ನು ಬೇಗ ಪೂರ್ಣಗೊಳಿಸಬೇಕು. ಕೋಡಿಮೊಳೆ ಕೆರೆಯಿಂದ ಬಂಡಿಗೆರೆ, ಮಲ್ಲೇದೇವನಹಳ್ಳಿ ಕೆರೆ, ಪುಟ್ಟನಪುರ ಕೆರೆಗಳಿಗೆ ನೀರು ತುಂಬಿಸಲು ಸೆಸ್ಕ್‌ನಿಂದ ಅಗತ್ಯ ಕಾರ್ಯವನ್ನು ಮಾಡಬೇಕೆಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೋಟಗಾರಿಕಾ ಇಲಾಖೆಯಲ್ಲಿ ಸೋಲಾರ್ ಪಂಪ್‌ಸೆಟ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಕೊಡುತ್ತಿಲ್ಲ. ಇದರ ಪ್ರಾತ್ಯಕ್ಷಿಕೆಯನ್ನು ಜಿಲ್ಲೆಯ ಯಾವುದೇ ಭಾಗದಲ್ಲಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸದಿರು. ದೊಡ್ಡಮೋಳೆ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಳೆಪೆಯಾಗಿರುವುದರ ಬಗ್ಗೆ ಜನ ದೂರು ನೀಡಿದ್ದಾರೆ. ಈ ಕೂಡಲೇ ಅದನ್ನು ಪರಿಶೀಲಿಸುವಂತೆ ಸೂಚಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸ್, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ವೀಣಾ ಉಪಸ್ಥಿತರಿದ್ದರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 31 ಎಎನ್‌ಎಂ ಶುಶ್ರೂಷಕರ ವಸತಿ ಗೃಹಗಳಿವೆ. ಆದರೆ 16 ಕಟ್ಟಡಗಳಲ್ಲಿ ಮಾತ್ರ ನರ್ಸ್‌ಗಳು ವಾಸವಿದ್ದಾರೆ. ಉಳಿದ 15 ಕಟ್ಟಡಗಳು ನರ್ಸ್‌ಗಳ ನೇಮಕವಾಗದೆ ಖಾಲಿಯಾಗಿವೆ. ಕಟ್ಟಡಗಳಲ್ಲಿ ಗಿಡಗಂಟಿ ಬೆಳೆದುಕೊಂಡಿದ್ದು, ಕಿಟಕಿ ಗಾಜುಗಳೆಲ್ಲ ಹಾಳಾಗಿವೆ. ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಡ ಕಟ್ಟಿಸಿದ್ದರೂ ಬಳಕೆಯಾಗದೆ ಇರುವುದರ ಬಗ್ಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net